ದಳಪತಿ ವಿಜಯ್ ನಟನೆಯ ‘‘ಜನ ನಾಯಗನ್’ ಸಿನಿಮಾ (Jana Nayagan) ಈ ವಾರವೇ ಥಿಯೇಟರ್ಗೆ ಬರ್ತಿದೆ. ಈ ಸಿನಿಮಾ ತೆಲುಗಿನ ಸೂಪರ್ ಹಿಟ್ ‘ಭಗವಂತ್ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ.
ಈ ಬಿಗ್ ಬಜೆಟ್ ಸಿನಿಮಾವನ್ನು ಹೆಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ಇಂಟರ್ವ್ಯೂ ಒಂದರಲ್ಲಿ ಅವರು ಒರಿಜಿನಲ್ ಸಿನಿಮಾದಿಂದ ಎಷ್ಟು ಭಾಗವನ್ನು ಕಾಪಿ ಮಾಡಲಾಗಿದೆ ಅಂತ ಬಿಚ್ಚಿಟ್ಟಿದ್ದಾರೆ.
‘ಜನ ನಾಯಕನ್’ ಸಿನಿಮಾದಲ್ಲಿ ಒರಿಜಿನಲ್ ಕಥೆಯ ಶೇಕಡಾ 50 ರಷ್ಟು ಭಾಗ ಮಾತ್ರ ಇರಲಿದೆ ಎಂದು ಹೆಚ್. ವಿನೋದ್ ಹೇಳಿದ್ದಾರೆ. ಚಿತ್ರದ ಫಸ್ಟ್ ಹಾಫ್ನಲ್ಲಿ ಶೇ. 60 ರಷ್ಟು ಮತ್ತು ಸೆಕೆಂಡ್ ಹಾಫ್ನಲ್ಲಿ ಕೇವಲ ಶೇ. 20 ರಷ್ಟು ಮಾತ್ರ ಒರಿಜಿನಲ್ ಕಥೆ ಇರಲಿದೆ. ತಾವು ವಿಜಯ್ ಅವರಿಗೆ ರಿಮೇಕ್ ಯಾಕೆ ಮಾಡಬೇಕು ಎಂದು ಕೇಳಿದ್ದಾಗಿ ವಿನೋದ್ ಹೇಳಿದ್ದಾರೆ. ಅದಕ್ಕೆ ವಿಜಯ್ ಅವರು ಒರಿಜಿನಲ್ ಸಿನಿಮಾದ ಪ್ರತಿಯೊಂದು ಸೀನ್ ವಿವರಿಸಿ ತಮಗೆ ಯಾಕೆ ಇಷ್ಟ ಆಯ್ತು ಅಂತ ಹೇಳಿದ್ರಂತೆ. ವಿಜಯ್ ಅವರಿಗೆ ಮಹಿಳಾ ಸಬಲೀಕರಣದ ಕಥೆಗಳೆಂದರೆ ತುಂಬಾ ಇಷ್ಟ. ಈ ಹಿಂದೆ ಅಜಿತ್ ಕುಮಾರ್ ಜೊತೆ ‘ಪಿಂಕ್’ ರಿಮೇಕ್ ಮಾಡುವಾಗಲೂ ಇದೇ ರೀತಿ ಆಗಿತ್ತು ಎಂದು ವಿನೋದ್ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು
ಮೊದಲಿಗೆ ತಾವು ವಿಜಯ್ ಅವರ ಕೊನೆಯ ಸಿನಿಮಾಗೆ ಬೇರೆ ಕಥೆ ರೆಡಿ ಮಾಡಿದ್ದಾಗಿ ಡೈರೆಕ್ಟರ್ ಹೇಳಿದ್ದಾರೆ. ಅದು ಇಬ್ಬರು ಬುದ್ಧಿವಂತರ ನಡುವೆ ನಡೆಯುವ ಜಿದ್ದಾಜಿದ್ದಿನ ಕಥೆಯಾಗಿತ್ತು. ಆದರೆ ಆ ಕಥೆ ತುಂಬಾ ಹೆವಿಯಾಗಿದೆ ಎಂದು ವಿಜಯ್ ರಿಜೆಕ್ಟ್ ಮಾಡಿದ್ದರು. ಅದರ ಬದಲು ‘ಭಗವಂತ್ ಕೇಸರಿ’ ಸಿನಿಮಾ ರಿಮೇಕ್ ಮಾಡಲು ಸಜೆಸ್ಟ್ ಮಾಡಿದ್ದರು. ಬಾಲಕೃಷ್ಣ ಅವರ ಸಿನಿಮಾಗಳ ಸ್ಟೈಲೇ ಬೇರೆ ಇರುತ್ತದೆ. ಆದರೆ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಈ ದೊಡ್ಡ ಅವಕಾಶವನ್ನು ಕೈಬಿಡಲು ತಮಗೆ ಇಷ್ಟವಿರಲಿಲ್ಲ ಎಂದು ಹೆಚ್. ವಿನೋದ್ ಮಾಹಿತಿ ನೀಡಿದ್ದಾರೆ.
‘ಜನ ನಾಯಗನ್’ ಸಿನಿಮಾ ಜುಲೈ 23ರಂದು ತೆರೆಗೆ ಬರಲಿದೆ. ಈ ಸಿನಿಮಾಗೆ ಕನ್ನಡದ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.














