ಮಂಗಳೂರು, ಜುಲೈ 22: ಕರ್ನಾಟಕದಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಮಳೆ ಪಡೆಯುವ ಕರಾವಳಿ ಭಾಗವೇ ಈ ಬಾರಿ ಮಳೆ ಕೊರತೆಯ ಆತಂಕ ಎದುರಿಸುತ್ತಿದೆ. ದಕ್ಷಿಣ ಕನ್ನಡ (Dakshina Kannada) ಹಾಗೂ
ಉಡುಪಿ ಜಿಲ್ಲೆಗಳಲ್ಲಿ 2026 ರ ಜನವರಿ 1ರಿಂದ ಜುಲೈ 19ರವರೆಗೆ ದಾಖಲಾಗಿರುವ ಮಳೆಯ (Monsoon Rain) ಪ್ರಮಾಣ ವಾಡಿಕೆಗಿಂತ ಗಣನೀಯವಾಗಿ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಅದರ ಪರಿಣಾಮ ಕಾಣಿಸತೊಡಗಿದೆ. ವಿಶೇಷವಾಗಿ ಭತ್ತದ ನಾಟಿ ನಡೆಯುವ ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟಿರುವುದು ರೈತರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಲಭ್ಯ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ 1,929.8 ಮಿ.ಮೀ. ಮಳೆ ದಾಖಲಾಗಬೇಕಿದ್ದರೆ, ಈ ವರ್ಷ ಕೇವಲ 1,174.9 ಮಿ.ಮೀ. ಮಳೆಯಷ್ಟೇ ಸುರಿದಿದೆ. ಅಂದರೆ ಜಿಲ್ಲೆಯಲ್ಲಿ ಶೇ 39ರಷ್ಟು ಮಳೆ ಕೊರತೆ ದಾಖಲಾಗಿದೆ. ಇದೇ ರೀತಿ ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯ 2,203.4 ಮಿ.ಮೀ. ಮಳೆಯ ಬದಲಿಗೆ 1,348.2 ಮಿ.ಮೀ. ಮಳೆಯಾಗಿ ಅಲ್ಲಿಯೂ ಶೇ 39ರಷ್ಟು ಕೊರತೆ ಕಂಡುಬಂದಿದೆ.
ಭತ್ತ ನಾಟಿ ಸಮಯದಲ್ಲೇ ಮಳೆ ಕೊರತೆಯ ಹೊಡೆತ
ಭತ್ತದ ಕೃಷಿಗೆ ಅತ್ಯಂತ ಮಹತ್ವದ ಜೂನ್ ತಿಂಗಳಲ್ಲಿಯೇ ಮಳೆ ಕೈಕೊಟ್ಟಿರುವುದು ರೈತರಿಗೆ ದೊಡ್ಡ ಹೊಡೆತವಾಗಿದೆ. ಜೂನ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 57ರಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ 50ರಷ್ಟು ಮಳೆ ಕೊರತೆ ದಾಖಲಾಗಿದೆ. ಇದರಿಂದ ಭತ್ತದ ನಾಟಿ ಮತ್ತು ಇತರ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆಯಾಗಿವೆ.
ಪುತ್ತೂರು ತಾಲೂಕಿನಲ್ಲಿ ಅತಿಹೆಚ್ಚು ಮಳೆ ಕೊರತೆ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಪುತ್ತೂರು ತಾಲೂಕಿನಲ್ಲಿ ಅತಿ ಹೆಚ್ಚು, ಅಂದರೆ ಶೇ 48ರಷ್ಟು ಮಳೆ ಕೊರತೆ ದಾಖಲಾಗಿದೆ. ಬಳಿಕ ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳಲ್ಲಿ ತಲಾ ಶೇ 45, ಮೂಡುಬಿದಿರೆ ಶೇ 44, ಬೆಳ್ತಂಗಡಿ ಶೇ 43, ಉಳ್ಳಾಲ ಶೇ 37, ಕಡಬ ಶೇ 27 ಹಾಗೂ ಸುಳ್ಯ ತಾಲೂಕಿನಲ್ಲಿ ಶೇ 26ರಷ್ಟು ಮಳೆ ಕೊರತೆ ದಾಖಲಾಗಿದೆ.
ಇದನ್ನೂ ಓದಿ: ಕರಾವಳಿ ಸೇರಿ ಕರ್ನಾಟಕದ ಹಲವೆಡೆ ಇನ್ನೆರಡು ದಿನ ಮಳೆ, ಉತ್ತರ ಒಳನಾಡಿನಲ್ಲಿ ಭಾರೀ ಗಾಳಿ
ಕಳೆದ ವರ್ಷದ ಇದೇ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದಿರುವುದರಿಂದ ಕೃಷಿ ಮಾತ್ರವಲ್ಲದೆ ಜಲಮೂಲಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಕರಾವಳಿ ಭಾಗದಲ್ಲೂ ಬರದ ಲಕ್ಷಣಗಳು ತೀವ್ರಗೊಳ್ಳುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ














