ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 219 ರನ್ ಕಲೆಹಾಕಿತು. ತಂಡದ ಪರ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ
ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 200 ರನ್ಗಳ ಗಡಿ ದಾಟುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 200 ಕ್ಕೂ ಅಧಿಕ ರನ್ ಕಲೆಹಾಕಿದ ತಂಡವೆಂಬ ವಿಶ್ವದಾಖಲೆ ನಿರ್ಮಿಸಿತು. ಟಿ20 ಇತಿಹಾಸದಲ್ಲಿ ಟೀಂ ಇಂಡಿಯಾ ಇದುವರೆಗೆ 52 ಬಾರಿ 200+ ರನ್ ಕಲೆಹಾಕಿದೆ. ಇದರೊಂದಿಗೆ ಈ ಸಾಧನೆ ಮಾಡಿದ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಹಾಗೆಯೇ ಟೀಂ ಇಂಡಿಯಾ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ (9 ಬಾರಿ) 200+ ಮೊತ್ತ ಕಲೆಹಾಕಿದ ತನ್ನ ದಾಖಲೆಯನ್ನು ಸರಿಗಟ್ಟಿತು.
ತನ್ನದೇ ದಾಖಲೆ ಸರಿಗಟ್ಟಿದ ಭಾರತ
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 46 ಬಾರಿ 200 ಕ್ಕೂ ಹೆಚ್ಚು ರನ್ಗಳಿಸಿದೆ. ಕೌಂಟಿ ಕ್ರಿಕೆಟ್ ತಂಡ ಸೋಮರ್ಸೆಟ್ 44 ಬಾರಿ ಈ ಸಾಧನೆ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ. ಹಾಗೆಯೇ 2026 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ತಂಡ ಮತ್ತೊಂದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಒಂದೇ ವರ್ಷದಲ್ಲಿ 9 ಬಾರಿ 200 ಪ್ಲಸ್ ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ. ಇದಕ್ಕೂ ಮೊದಲು ಅಂದರೆ 2024 ರಲ್ಲಿ ಇದೇ ಟೀಂ ಇಂಡಿಯಾ 9 ಬಾರಿ 200ಕ್ಕೂ ಅಧಿಕ ರನ್ ಕಲೆಹಾಕಿತ್ತು.
ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಂ ಇಂಡಿಯಾ
ಇದಕ್ಕೂ ಮೊದಲು, ಭಾರತ 2023 ರಲ್ಲಿ 7 ಬಾರಿ, ಜಪಾನ್ 2024 ರಲ್ಲಿ 7 ಬಾರಿ ಮತ್ತು ಆಸ್ಟ್ರಿಯಾ 2025 ರಲ್ಲಿ 7 ಬಾರಿ ಈ ಮೈಲಿಗಲ್ಲು ಸಾಧಿಸಿತು. 2022 ರಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು 2024 ರಲ್ಲಿ ವೆಸ್ಟ್ ಇಂಡೀಸ್ ತಲಾ 6 ಬಾರಿ 200 ಕ್ಕೂ ಅಧಿಕ ರನ್ಗಳ ದಾಟುವಲ್ಲಿ ಯಶಸ್ವಿಯಾಗಿದ್ದವು. ಆದಾಗ್ಯೂ, ಭಾರತ ಅವೆಲ್ಲವನ್ನೂ ಮೀರಿಸಿದ್ದು ಮಾತ್ರವಲ್ಲದೆ ತನ್ನದೇ ಆದ ದಾಖಲೆಗಳನ್ನು ಪುನಃ ಬರೆಯುವ ಮೂಲಕ ಮುನ್ನಡೆಯುತ್ತಿದೆ. ಮುಂಬರುವ ಪಂದ್ಯದಲ್ಲಿ ಅಥವಾ ಸರಣಿಯಲ್ಲಿ ಭಾರತ ಇದೇ ಆಕ್ರಮಣಕಾರಿ ಶೈಲಿಯನ್ನು ಮುಂದುವರಿಸಿದರೆ, ಒಂದೇ ವರ್ಷದಲ್ಲಿ 10 ಬಾರಿ 200+ ರನ್ ಗಳಿಸಿದ ಮೊದಲ ತಂಡವಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸುವ ಅವಕಾಶ ಹೊಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ














