ಬೆಂಗಳೂರು, ಜುಲೈ 21: ಜಿಬಿಎ ವತಿಯಿಂದ ನಡೆದ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಿಬ್ಬಂದಿ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಶಿವಾಜಿನಗರದಲ್ಲಿ
ಕೇಳಿಬಂದಿದೆ. ಈ ಬಗ್ಗೆ ಕಿಡಿ ಕಾರಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು ಎಂದಿದ್ದಾರೆ. ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು ಈ ಬಗ್ಗೆ ಪೊಲೀಸ್ ಆಯುಕ್ತರು ಮತ್ತು ಜಿಬಿಎ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದವರು ತಿಳಿಸಿದ್ದಾರೆ.
ಸಚಿವ ಕೃಷ್ಣ ಭೈರೇಗೌಡರು ಹೇಳಿದ್ದೇನು?
ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಜಾರಿಗೊಳಿಸುವಾಗ ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವುದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಕಾನೂನಿನಂತೆ ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ. ಸಾರ್ವಜನಿಕ ಕರ್ತವ್ಯದಲ್ಲಿರುವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಯಾರನ್ನೂ ಸಹ ನಾವು ಬಿಡುವುದಿಲ್ಲ. ನಾನು ಜಿಬಿಎ (GBA) ಮತ್ತು ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಅಲ್ಲದೆ ನಾವು ಒಟ್ಟಾಗಿ ಮಾದರಿಯಾಗುವಂತಹ ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಾಜಿನಗರದಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ ಆರೋಪ
ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನ ವಶಕ್ಕೆ
ಫುಟ್ಪಾತ್ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಹಲ್ಲೆ ನಡೆದಿರುವ ಬಗ್ಗೆ ಎಇಇ ಮಾಧವ ರಾವ್ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತೇವೆ. ರಕ್ಷಣೆ ಕೋರಿ ಅಧಿಕಾರಿಗಳು ಮನವಿ ಸಲ್ಲಿಸಿದ್ದ ಬಗ್ಗೆ ಪರಿಶೀಲಿಸುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳೋಕೆ ಯಾರಿಗೂ ಹಕ್ಕಿಲ್ಲ. ಯಾರೇ ತಪ್ಪು ಮಾಡಿದರೂ ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲುಇಲ್ಲಿ ಕ್ಲಿಕ್ ಮಾಡಿ.















