ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಡೆಂಗ್ಯೂ ಜ್ವರದ ಪ್ರಕರಣಗಳಿಗೆ ಬ್ರೇಕ್ ಹಾಕಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI) ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ
ಲಕ್ಷಾಂತರ ಜನರನ್ನ ಬಾಧಿಸುತ್ತಿದ್ದ ಈ ಮಾರಕ ಡೆಂಗ್ಯೂ ಜ್ವರಕ್ಕೆ ಕೊನೆಗೂ ಮೊದಲ ಲಸಿಕೆ ಲಭ್ಯವಾಗಿದೆ. ಜಪಾನ್ನ ಟಕೇಡಾ ಫಾರ್ಮಾಸ್ಯುಟಿಕಲ್ ಕಂಪನಿ ಅಭಿವೃದ್ಧಿಪಡಿಸಿದ ಕ್ಯೂಡೆಂಗಾ (QDENGA) ಲಸಿಕೆಯನ್ನು ತುರ್ತು ಬಳಕೆ ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO) ಅನುಮೋದಿಸಿದೆ. ಇದು ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಡೆಂಗ್ಯೂ ಲಸಿಕೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಲಸಿಕೆ ದೇಶದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಹೊಸ ಭರವಸೆಯನ್ನ ಹುಟ್ಟುಹಾಕಿದೆ.
2025ರಲ್ಲಿ 1,21,824 ಕೇಸ್ ದಾಖಲು
ವಿಶ್ವದ ಡೆಂಗ್ಯೂ ಸೋಂಕಿತರ ಪ್ರಮಾಣದಲ್ಲಿ ಸುಮಾರು ಮೂರನೇ ಒಂದು ಭಾಗವನ್ನು ಭಾರತವೇ ಹೊಂದಿದೆ. ದೇಶಾದ್ಯಂತ ಪ್ರತಿ ವರ್ಷ ಲಕ್ಷಾಂತರ ಜನರು ಡೆಂಗ್ಯೂಗೆ ತುತ್ತಾಗುತ್ತಾರೆ ಮತ್ತು ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಕೇಂದ್ರದ (NCVBDC) ಪ್ರಕಾರ 2025ರಲ್ಲಿ 1,21,824 ಕೇಸ್ಗಳು ಮತ್ತು 131 ಸಾವುಗಳು ದಾಖಲಾಗಿವೆ. 2024ರಲ್ಲಿ 297 ಮತ್ತು 2023ರಲ್ಲಿ 485 ಸಾವುಗಳು ಸಂಭವಿಸಿವೆ.
QDENGA ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಕ್ಯೂಡೆಂಗಾ ಟೆಟ್ರಾವ್ಯಾಲೆಂಟ್ ಲೈವ್ ಅಟೆನ್ಯೂವೇಟೆಡ್ ಲಸಿಕೆಯಾಗಿದೆ. ಇದು ಡೆಂಗ್ಯೂ ವೈರಸ್ನ ನಾಲ್ಕು ಸೀರೋಟೈಪ್ಗಳ (DENV-1, DENV-2, DENV-3 ಮತ್ತು DENV-4) ರಕ್ಷಣೆ ನೀಡುತ್ತದೆ. ಇದರ ಪ್ರಮುಖ ಅನುಕೂಲವೆಂದರೆ ಈ ಹಿಂದಿನ ಲಸಿಕೆಗಳಂತೆ (Dengvaxia), ಕ್ಯೂಡೆಂಗಾ ಲಸಿಕೆ ಪಡೆಯಲು ವ್ಯಕ್ತಿಗೆ ಈ ಮುಂಚೆ ಡೆಂಗ್ಯೂ ಬಂದಿದೆಯೇ ಇಲ್ಲವೇ ಎಂದು ಪತ್ತೆಹಚ್ಚುವ ಮುನ್ನಾ ರಕ್ತ ಪರೀಕ್ಷೆಯ (Pre-vaccination screening) ಅಗತ್ಯವಿರುವುದಿಲ್ಲ. ಡೆಂಗ್ಯೂ ಇದ್ದವರಿಗೂ, ಇಲ್ಲದವರಿಗೂ ಲಸಿಕೆ ನೀಡಬಹುದು.
ಇದನ್ನೂ ಓದಿ: Hand Skin Care: ಕೈಗಳ ಚರ್ಮ ಸುಲಿದು ಬೀಳುತ್ತಿದೆಯೇ? ಲಕ್ಷಣಗಳು ಗುರುತಿಸಿ, ಮನೆಯಲ್ಲೇ ಗುಣಪಡಿಸಿಕೊಳ್ಳಿ
ಯಾರು ಲಸಿಕೆ ತೆಗೆದುಕೊಳ್ಳಬಹುದು?
ತಜ್ಞರ ಸಮಿತಿಯ ಶಿಫಾರಸ್ಸಿನಂತೆ 4ರಿಂದ 60 ವರ್ಷದೊಳಗಿನ ವ್ಯಕ್ತಿಗಳಿಗೆ ಮಾತ್ರ ಈ ಲಸಿಕೆಯನ್ನು ಅನುಮೋದಿಸಲಾಗಿದೆ. ಲಸಿಕೆಯನ್ನು ಎರಡು ಡೋಸ್ಗಳಲ್ಲಿ ನೀಡಲಾಗುತ್ತದೆ. ಇದನ್ನು 2 ಡೋಸ್ಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ 3 ತಿಂಗಳ ನಂತರ ಎರಡನೇ ಡೋಸ್ ಪಡೆಯಬೇಕು.
ಲಸಿಕೆ ಎಷ್ಟು ಪರಿಣಾಮಕಾರಿ?
ದೀರ್ಘಕಾಲದ ಕ್ಲಿನಿಕಲ್ ಅಧ್ಯಯನಗಳು ಉತ್ತಮ ಫಲಿತಾಂಶಗಳನ್ನು ತೋರಿಸಿವೆ. ಲಸಿಕೆ ಮಧ್ಯಮ ತೀವ್ರತೆಯ ಡೆಂಗ್ಯೂ ಅಪಾಯವನ್ನು 61%ರಿಂದ 80%ರವರೆಗೆ ಕಡಿಮೆ ಮಾಡುತ್ತದೆ. ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು 84%ರಿಂದ 90%ರವರೆಗೆ ಕಡಿಮೆ ಮಾಡುತ್ತದೆ. ಎಲ್ಲಾ ನಾಲ್ಕು ಡೆಂಗ್ಯೂ ವೈರಸ್ ಪ್ರಕಾರಗಳ ವಿರುದ್ಧ ರಕ್ಷಣೆ ನೀಡುತ್ತದೆ.
ಲಸಿಕೆ ಬೆಲೆ ಎಷ್ಟು?
ಲಸಿಕೆಗೆ ಎರಡು ಡೋಸ್ ಅಗತ್ಯವಿದೆ. ಪ್ರತಿ ಡೋಸ್ನ ಅಂದಾಜು ಬೆಲೆ ರೂ. 6,000 ರಿಂದ ರೂ. 12,000ರವರೆಗೆ ಇರಬಹುದು. ದೇಶೀಯ ಉತ್ಪಾದನೆ ಹೆಚ್ಚಾದಂತೆ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ.
ಭಾರತದಲ್ಲಿ ಉತ್ಪಾದನೆ
2024ರಲ್ಲಿ ಟಕೇಡಾ ಕಂಪನಿ ಹೈದರಾಬಾದ್ನ ಬಯಲಾಜಿಕಲ್ ಇ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಭಾರತದಲ್ಲಿ ವರ್ಷಕ್ಕೆ 5 ಕೋಟಿ ಡೋಸ್ಗಳನ್ನು ಉತ್ಪಾದಿಸುವ ಯೋಜನೆಯಿದೆ. ಇದು ಲಸಿಕೆಯ ಲಭ್ಯತೆ ಹೆಚ್ಚಿಸುತ್ತದೆ ಮತ್ತು ಬೆಲೆ ಕಡಿಮೆಯಾಗುವುದಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: Health Care: ಕಿಡ್ನಿ ಪ್ರಾಬ್ಲಂ ಆಗಬಾರದಾ? ಹಾಗಾದ್ರೆ ದಿನಕ್ಕೆ ಇಷ್ಟು ಗ್ಲಾಸ್ ನೀರು ಕುಡಿಯಿರಿ!
ಡೆಂಗ್ಯೂ ಹರಡದಂತೆ ತಡೆಯುತ್ತದೆಯೆ?
ಇಲ್ಲ. ಲಸಿಕೆಯು ಡೆಂಗ್ಯೂನಿಂದ ರಕ್ಷಣೆ ಒದಗಿಸುತ್ತದೆಯೇ ಹೊರತು, ಸಂಪೂರ್ಣವಾಗಿ ಹರಡದಂತೆ ತಡೆಯಲು ಸಾಧ್ಯವಿಲ್ಲ. ಕೆಲವು ನಿಯಂತ್ರಣ ಕ್ರಮಗಳನ್ನ ನೀವೇ ಮಾಡಿಕೊಳ್ಳಬೇಕು. ನಿಮ್ಮ ಮನೆಗಳ ಸುತ್ತಾ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಪರದೆಗಳನ್ನ ಬಳಸುವುದು, ಕಿಟಕಿಗಳಿ ಜಾಲರಿ ಮತ್ತು ಮಸ್ಕಿಟೋ ನೆಟ್ ಬಳಸುವುದು ಮುಂತಾದ ಕ್ರಮಗಳನ್ನು ಹಿಂದಿನಂತೆಯೇ ಮುಂದುವರಿಸಬೇಕು. ಲಸಿಕೆ ಪಡೆದ ಮೇಲೂ ಸೊಳ್ಳೆ ಕಡಿತದಿಂದ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ, ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವುದು (ನಿಂತ ನೀರನ್ನು ತೆಗೆಯುವುದು) ಅತ್ಯಗತ್ಯ. ಈ ಲಸಿಕೆಯು ಡೆಂಗ್ಯೂ ವಿರುದ್ಧ ಹೋರಾಡಲು ಒಂದು ಹೆಚ್ಚುವರಿ ಆಯುಧವೇ ಹೊರತು, ಸದ್ಯಕ್ಕೆ ಚಾಲ್ತಿಯಲ್ಲಿರುವ ಮುನ್ನೆಚ್ಚರಿಕೆ ಕ್ರಮಗಳಿಗೆ ಪರ್ಯಾಯವಲ್ಲ ಎಂದು ತಜ್ಞರಿ ಎಚ್ಚರಿಸಿದ್ದಾರೆ.














