ನವದೆಹಲಿ (ಜು.21): ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿ ನಡೆದಿದ್ದು, ಹೈಕಮಾಂಡ್ ಅಂಗಳದಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ನಡೆದಿದೆ. ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ದಾರೆ. ಇಂದೇ ಅಧಿಕೃತವಾಗಿ ಸಚಿವರ ಫೈನಲ್ ಲಿಸ್ಟ್ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ಐವರಿಗೆ ಸಚಿವ ಸ್ಥಾನ ಸಿಗೋದು ಫಿಕ್ಸ್?
ಡಿಕೆ ಸಂಪುಟದಲ್ಲಿ ಯಾರಿಗೆ ಸ್ಥಾನ, ಇಂದೇ ಫೈನಲ್?
ಡಿಕೆ ಶಿವಕುಮಾರ್ ಸಂಪುಟ ಸೇರಲು ಸಚಿವ ಆಕಾಂಕ್ಷಿಗಳ ಪಟ್ಟಿ ಈಗ ಭಾರಿ ದೊಡ್ಡದಾಗಿದ್ದು, 40ಕ್ಕೂ ಹೆಚ್ಚು ಆಕಾಂಕ್ಷಿಗಳು ಭಾರೀ ಲಾಬಿ ನಡೆದಿದ್ದಾರೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಡಿಕೆ ಶಿವಕುಮಾರ್ ಅವರ ಸಂಪುಟಕ್ಕೆ ಸೇರುವ ನೂತನ ಸಚಿವರು ಇವರೇ ಎಂಬ ಹೆಸರುಗಳು ಹರಿದಾಡ್ತಿದೆ. ಅದರಲ್ಲೂ ಈ ಐವರಿಗೆ ಮಂತ್ರಿಗಿರಿ ಫಿಕ್ಸ್ ಎನ್ನುವ ಮಾಹಿತಿ ಹೊರಬಂದಿದೆ.
ಹಳಬರನ್ನ ಕೈ ಬಿಡಲು ಖರ್ಗೆ ವಿರೋಧ
ಹೊಸಬರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ಡಿಕೆ ಶಿವಕುಮಾರ್ ಉತ್ಸುಕರಾಗಿದ್ದಾರೆ. ಆದ್ರೆ ಸಂಪೂರ್ಣವಾಗಿ ಹಳಬರನ್ನು ಕೈಬಿಟ್ಟರೆ ಪಕ್ಷಕ್ಕೆ ಸಂಕಷ್ಟವಾಗುತ್ತೆ ಎಂದು ಹಿಂದಿನ ಪಟ್ಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತ ಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ, ಜಾತಿ ಮತ್ತು ಜಿಲ್ಲಾವಾರು ಪ್ರಾತಿನಿಧ್ಯಕ್ಕೆ ಹೆಚ್ಚಿನ ಒತ್ತನ್ನು ಈ ಬಾರಿ ನೀಡಲಾಗುತ್ತದೆ ಎನ್ನುವ ಸುದ್ದಿ ಕೆಪಿಸಿಸಿ ವಲಯದಲ್ಲಿ ಹರಿದಾಡುತ್ತಿದೆ.
ಈ ಐವರು ಸಚಿವರಾಗುವುದು ಪಕ್ಕಾ!?
1. ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ (2013ರಿಂದ ಸತತ ಗೆಲುವು)
2. ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ (ನಾಲ್ಕು ಬಾರಿ ಶಾಸಕರು)
3. ಚಳ್ಳಕೆರೆ ಕ್ಷೇತ್ರದ ಶಾಸಕ ಟಿ ರಘುಮೂರ್ತಿ (3 ಬಾರಿ ಶಾಸಕರು)
4. ಹುಬ್ಬಳ್ಳಿ – ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್ (3 ಬಾರಿ ಶಾಸಕರು)
5. ಕಡೂರು ಶಾಸಕ ಕೆಎಸ್ ಆನಂದ್ ಅಥವಾ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ (ಇಬ್ಬರಲ್ಲಿ ಒಬ್ಬರು)
ಈ ಐವರಿಗೆ ಸಚಿವ ಸ್ಥಾನ ಸಿಗೋದು ಬಹುತೇಕ ಖಚಿತ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಸಚಿವರ ಸ್ಥಾನದಲ್ಲಿ ರಿಜ್ವಾನ್ ಅರ್ಷದ್, ಜಮೀರ್ ಅಹಮದ್ ಖಾನ್, ತನ್ವೀರ್ ಸೇಠ್, ಸಲೀಂ ಅಹಮದ್, ಕನಿಜ್ ಫಾತಿಮಾ ಮುಂತಾದ ಮುಸ್ಲಿಂ ನಾಯಕರು ಸಚಿವ ಸ್ಥಾನದ ರೇಸ್ ನಲ್ಲಿ ಇದ್ದು ಇವರಲ್ಲಿ ಮೂವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.














