ಬೆಂಗಳೂರು (ಜು.20): ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ (Chennamma) ನಿಧನದ ಹಿನ್ನೆಲೆ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು
ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ಜೈಲಿಂದ (Jail) ಹೊರ ಬಂದು ನೇರವಾಗಿ ಭಾಗಿಯಾಗದ ಪ್ರಜ್ವಲ್ ರೇವಣ್ಣ ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ
ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚೆನ್ನಮ್ಮ ನಿಧನ ಹಿನ್ನೆಲೆ ಅವರ ಮೊಮ್ಮಗನಾದ ಪ್ರಜ್ವಲ್ ರೇವಣ್ಣ ಅವರು ಅಂತಿಮ ದರ್ಶನಕ್ಕೆ ಆಗಮಿಸಲು ಅನುಮತಿ ಕೋರಿ ಪೆರೋಲ್ ಸಲ್ಲಿಕೆ ಮಾಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದೀಗ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲು ಮಾತ್ರ ಅವಕಾಶ ಕೇಳಿದ್ದಾರಂತೆ.
ಜೈಲಾಧಿಕಾರಿಗಳಿಂದ ಅನುಮತಿ
ವಿಡಿಯೋ ಕಾನ್ಸರೆನ್ಸ್ ಮೂಲಕ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಕೈದಿ ಪ್ರಜ್ವಲ್ ರೇವಣ್ಣ ಅನುಮತಿ ಕೋರಿದ್ದು, ಪ್ರಜ್ವಲ್ ರೇವಣ್ಣ ಮನವಿಗೆ ಸ್ಪಂದಿಸಿದ ಜೈಲಾಧಿಕಾರಿಗಳು ವಿಸಿ ಮೂಲಕ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅನುಮತಿ ನೀಡಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ ಜೈಲಿನ ಮೂಲಗಳು ಮಾಹಿತಿ ನೀಡಿದೆ.
ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನ
ತೀವ್ರ ಅನಾರೋಗ್ಯದ ಹಿನ್ನೆಲೆ ಚೆನ್ನಮ್ಮ ಶನಿವಾರ ಸಂಜೆ ಬೆಂಗಳೂರಿನಲ್ಲಿ ಮೃತಪಟ್ಟರು. ಅವರ ಅಂತಿಮ ದರ್ಶನಕ್ಕೆ ಜನ ಸಾಗರವೇ ಹರಿದು ಬರ್ತಿದೆ. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅವರ ಸ್ವಗ್ರಾಮದ ಬಳಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.
ಮೃತ ಚೆನ್ನಮ್ಮ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೊಳಗಾಗಿದ್ದು, ಕಳೆದ 2 ವರ್ಷದಿಂದ ಜೈಲಿನಲ್ಲಿದ್ದು, ಇದೀಗ ಹೊರಬಂದು ಅಜ್ಜಿ ಅಂತಿಮ ದರ್ಶನ ಪಡೀತಾರೆ ಎನ್ನಲಾಗಿತ್ತು. ಆದ್ರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಭಾಗಿಯಾಗಲು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಗೃಹದ ಮುಖ್ಯ ಅಧೀಕ್ಷಕರು ಅನುಮತಿ ನೀಡಿದ್ದಾರೆ.
ಇದನ್ನೂ ಓದಿ: Chennamma Devegowda: ದೇವೇಗೌಡರ ಮೌನ ಶಕ್ತಿ ಪತ್ನಿ ಚೆನ್ನಮ್ಮ ಏನು ಓದಿದ್ದಾರೆ? ರಾಜಕೀಯದಿಂದ ದೂರ ಉಳಿದಿದ್ಯಾಕೆ?
(ವರದಿ: ಗಂಗಾಧರ್, ನ್ಯೂಸ್18 ಕನ್ನಡ, ಬೆಂಗಳೂರು)














