ಹಾಸನ (ಜು.20): ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಅಂತಿಮ ದರ್ಶನಕ್ಕೆ ಹಾಸನದಲ್ಲಿ (Hassan) ಜನಸಾಗರವೇ ಹರಿದು ಬರ್ತಿದೆ. ದೊಡ್ಡಗೌಡರ ಕುಟುಂಬದ ದೊಡ್ಡ ಶಕ್ತಿಯಾಗಿದ್ದ
ಚೆನ್ನಮ್ಮ ಅವರ ಅಗಲಿಕೆಯ ನೋವು ಇಡೀ ದೇವೇಗೌಡರನ್ನ (Devegowda) ಕಾಡ್ತಿದೆ. ಇನ್ನು ಅಮ್ಮನಿಲ್ಲ ಎನ್ನುವ ನೋವು 6 ಮಕ್ಕಳನ್ನ ಕೂಡ ಬಾಧಿಸಿದ್ದು, ಮಾಜಿ ಸಚಿವ ರೇವಣ್ಣ (Revanna) ಬಿಕ್ಕಿ-ಬಿಕ್ಕಿ ಅಳ್ತಿದ್ದಾರೆ. ಇದೇ ವೇಳೆ ಅಮ್ಮ ಈ ಒಂದು ನೋವು ನನ್ನನ್ನು ಇಂದಿಗೂ ಕಾಡುತ್ತಿದೆ ಎಂದಿದ್ದಾರೆ. ಇತ್ತ ಅಮ್ಮನಂತಿದ್ದ ಅತ್ತೆಯನ್ನ ಕಳೆದುಕೊಂಡ ಭವಾನಿ ರೇವಣ್ಣ (Bhavani Revanna) ಕೂಡ ಮೃತದೇಹದ ಮುಂದೆ ಕಣ್ಣೀರು ಹಾಕ್ತಿದ್ದಾರೆ.
ಆ ದಾಳಿ ಮರೆಯೋಕೆ ಆಗಲ್ಲ
ತಾಯಿಯನ್ನು ಕಳೆದುಕೊಂಡ ಕಣ್ಣೀರು ಹಾಕ್ತಿರೋ ಮಾಜಿ ಸಚಿವ ರೇವಣ್ಣ ಅವ್ರು, ತಾಯಿ ಮೇಲಾದ ಆ್ಯಸಿಡ್ ದಾಳಿ ಬಗ್ಗೆ ನನಗೆ ಈಗಲೂ ಬೇಸರವಿದೆ ಎಂದಿದ್ದಾರೆ. ನನ್ನ ಮೇಲೆ ಆಗಬೇಕಿದ್ದ ದಾಳಿ ನನ್ನ ತಾಯಿ ಮೇಲಾಯಿತು. ಆ ಪ್ರಕರಣದಿಂದ ನನ್ನ ತಾಯಿ ಸಾಕಷ್ಟು ನೊಂದಿದ್ದರು ಎಂದು ರೇವಣ್ಣ ಹೇಳಿಕೊಂಡಿದ್ದಾರೆ.
‘ನಾಟಿ ಮಾಡಿ ಕೃಷಿ ಮಾಡಿದ್ರು ನನ್ನಮ್ಮ’
ಮನೆಗೆ ಯಾರೇ ಬಂದ್ರೂ ಊಟ ಹಾಕುತ್ತಿದ್ದ ನನ್ನ ದೇವತೆ ನನ್ನ ತಾಯಿ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ರೇವಣ್ಣ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ರೇವಣ್ಣ ಅವ್ರು, ಮೊದಲು ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಅಭಿಷೇಕ ಮಾಡಲು ಹೇಳಿದ್ದೇವೆ. ಅಲ್ಲಿ ತೀರ್ಥ ಪ್ರೊಕ್ಷಣೆ ಆದ್ಮೇಲೆ
ನಾಗಲಾಪುರ, ಪಡುಲುಪ್ಪೆ ಅಂತಿಮೆ ಯಾತ್ರೆ ಸಾಗುತ್ತೆ. ಅಲ್ಲಿ ನಮ್ಮ ತಾಯಿ ಒಡವೆ ಅಡವಿಟ್ಟು ಜಮೀನು ಖರೀದಿ ಮಾಡಿದ್ರು ಜೊತೆಗೆ ಅದೇ ಜಾಗದಲ್ಲಿ ನಮ್ಮ ತಾಯಿ ನಾಟಿ ಮಾಡಿ ಕೃಷಿ ಮಾಡ್ತಿದ್ರು. ಹೀಗಾಗಿ ಆ ಜಾಗಕ್ಕೂ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತೇವೆ.
ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನ
ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ಸ್ಥಳಕ್ಕೆ ಪಾರ್ಥಿವ ಶರೀರ ಬರಲಿದ್ದು, ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನ ನೆರವೇರತ್ತೆ
ಚನ್ನಮ್ಮನವರ ಕಿರಿಯ ಮಗ ಡಾ.ರಮೇಶ್ ಅಂತಿಮ ವಿಧಿ ವಿಧಾನ ಮಾಡ್ತಾರೆ. ನಾವೆಲ್ಲರೂ ಭಾಗಿಯಾಗುತ್ತೇವೆ, ದೇವಸ್ಥಾನದಲ್ಲಿ ಈಗಾಗಲೇ ಅಭಿಷೇಕ ಆಗ್ತಿದೆ ಅಲ್ಲಿಂದ ತೀರ್ಥ ತಂದು ಪ್ರೋಕ್ಷಣೆ ಮಾಡಲಾಗುತ್ತೆ ಎಂದು ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.
ಭವಾನಿ ರೇವಣ್ಣ ಕಣ್ಣೀರು
ಮಾಜಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಅತ್ತೆ ಮೃತದೇಹದ ಬಳಿ ಕುಳಿತು ಕಣ್ಣೀರು ಹಾಕಿದ್ದಾರೆ. ಅಮ್ಮನಂತಿದ್ದ ಅತ್ತೆಯನ್ನ ಕಳೆದುಕೊಂಡಿದ್ದೇವೆ ಎಂದು ಅಳುತ್ತಿದ್ರು. ಈ ವೇಳೆ ರೇವಣ್ಣ ಅವರು ಪತ್ನಿ ಭವಾನಿ ಅವರಿಗೆ ಸಾಮಾಧಾನ ಮಾಡಿದ್ದಾರೆ.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಹಾಸನ)














