ಬೆಂಗಳೂರು (ಜು.24): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ
ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Wangchuk) ಗುರುವಾರ ಮಧ್ಯರಾತ್ರಿಯ ನಂತರ ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಕೊನೆಗೊಳಿಸಿದ್ರು. ಹರಿಯಾಣದ ಗುರುಗ್ರಾಮ್ನ ಮೇದಾಂತ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಅವರು ತಮ್ಮ ಉಪವಾಸವನ್ನ ಅಂತ್ಯಗೊಳಿಸಿದರು. 10 ನಿಮಿಷಗಳ ಈ ಗೌಪ್ಯ ಸಭೆಯಲ್ಲಿ (Meeting) ಸೋನಮ್ ಇಟ್ಟ ಬೇಡಿಕೆಗಳೇನು? ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಕೇಳಲೇ ಇಲ್ವಾ ಸೋನಮ್?
ತಡರಾತ್ರಿ ಆಸ್ಪತ್ರೆಯಲ್ಲಿ ಗೌಪ್ಯ ಸಭೆ
ನಿನ್ನೆ (ಜು.23) ತಡರಾತ್ರಿ ಸುಮಾರು 11.45ರ ಸುಮಾರಿಗೆ ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್, ಐಸಿಯುನಲ್ಲಿದ್ದ ಸೋನಮ್ ವಾಂಗ್ಚುಕ್ ಅವರನ್ನು ಭೇಟಿಯಾಗಿದ್ರು. ಆ ವೇಳೆ, ಅಲ್ಲಿದ್ದ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳನ್ನ ಹೊರಗೆ ಕಳುಹಿಸಿ 10 ನಿಮಿಷಗಳ ಕಾಲ ಮೀಟಿಂಗ್ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸೋನಮ್ ಬೇಡಿಕೆ ಆಲಿಸಿದ ಸಚಿವರು
ಸೋನಮ್ ವಾಂಗ್ಚುಕ್ ಅವರನ್ನು ಭೇಟಿಯಾಗುವ ಮುನ್ನ ಇಬ್ಬರು ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜೊತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಲ್ಕು ತಾಸುಗಳ ಸುದೀರ್ಘ ಮಾತುಕತೆಯನ್ನು ನಡೆಸಿದ್ದರು. ಬಳಿಕ ಆಸ್ಪತ್ರೆ ಬಂದ ಸಚಿವರು ಸೋನಮ್ ವಾಂಗ್ಚುಕ್ ಬೇಡಿಕೆ ಆಲಿಸಿದ್ದಾರೆ. ಬಳಿಕ ಕೇಂದ್ರದ ಸಂದೇಶವನ್ನ ಕೂಡ ಆಲಿಸಿದ್ದಾರೆ.
3 ಕಂಡೀಷನ್ ಹಾಕಿದ ಸೋನಮ್
ಇಬ್ಬರು ಕೇಂದ್ರ ಸಚಿವರು ಮತ್ತು ಸೋನಮ್ ವಾಂಗ್ಚುಕ್ ನಡುವೆ ಸುಮಾರು ಹತ್ತು ನಿಮಿಷಗಳ ಮಾತುಕತೆ ನಡೆದಿದ್ದು, ಈ ವೇಳೆ ಹೋರಾಟಗಾರ ಕೇಂದ್ರದಕ್ಕೆ 3 ಕಂಡೀಷನ್ ಹಾಕಿದ್ದಾರೆ ಎನ್ನಲಾಗ್ತಿದೆ. ಕ್ಲೋಸ್ ಡೋರ್ ಮೀಟಿಂಗ್ನಲ್ಲಿ ಏನೇನು ವಿಷಯ ಚರ್ಚೆಯಾಗಿದೆ ಎನ್ನುವುದು ಗೌಪ್ಯವಾಗಿದೆ.
ಸೋನಮ್ ಇಟ್ಟ ಬೇಡಿಕೆಗಳು ಏನು?
* ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಜುಲೈ 20ರಂದು ಸಂಸತ್ ಚಲೋ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ವಿರುದ್ದ ಪ್ರಕರಣಗಳನ್ನು ದಾಖಲಿಸಬಾರದು ಎನ್ನುವ ಷರತ್ತನ್ನು ಸೋನಮ್ ವಾಂಗ್ಚುಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ, ಯಾವುದೇ ಕೇಸ್ ದಾಖಲಿಸಲಿಲ್ಲ .
* ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ, ಮೃತಪಟ್ಟ ಕುಟುಂಬಕ್ಕೆ ಆರ್ಥಿಕ ಸಹಾಯದ ಬಗ್ಗೆಯೂ ಸೋನಮ್ ವಾಂಗ್ಚುಕ್ ಒತ್ತಾಯಿಸಿದ್ದರು.
*ನೀಟ್ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ವಾಂಗ್ಚುಕ್ ಒತ್ತಾಯಿಸಿದ್ದರು ಎಂದು ಹೇಳಲಾಗ್ತಿದೆ.
ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ನೀಟ್ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಸೋನಮ್ ವಾಂಗ್ಚುಕ್ ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ಒತ್ತಾಯಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.















