ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಪ್ರಮುಖ (Namma Metro-BMRCL) ಎಚ್ಚರಿಕೆ ನೀಡಿದೆ. ಮೆಟ್ರೋ ನೆಟ್ ವರ್ಕ್ ಆವರಣದಲ್ಲಿ
ನಿಯಮಗಳ ಉಲ್ಲಂಘನೆ, ಭದ್ರತಾ ಲೋಪಗಳನ್ನು ತಡೆಯುವ ಉದ್ದೇಶದಿಂದ ನಿಯಮಗಳನ್ನು ಮೀರಿದರೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು (Metro Rail Fines) ಏಕಾಏಕಿ ಬರೋಬ್ಬರಿ ಶೇಕಡಾ 400 ರಷ್ಟು ಹೆಚ್ಚಿಸಿ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರ ಭದ್ರತೆಗೆ ಮೊದಲ ಆದ್ಯತೆ ನೀಡುವುದು, ಮೆಟ್ರೋ ಆಸ್ತಿಯ ರಕ್ಷಣೆ (Protection of Metro Property), ಪ್ರಯಾಣದ ಸಮಯದಲ್ಲಿ ಶಿಸ್ತು ಕಾಪಾಡುವುದು ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸ ನಿಯಮಗಳು ಭಾನುವಾರದಿಂದಲೇ ಜಾರಿಗೆ ಬಂದಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
ಹೊಸ ಆದೇಶದಲ್ಲಿ ಪ್ರಮುಖವಾಗಿ ಮೆಟ್ರೋ ಟ್ರ್ಯಾಕ್ ಪ್ರವೇಶ ಮಾಡುವುದು ಅತ್ಯಂತ ಪ್ರಮಾದಕರ ಅಪರಾಧ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಇಂತಹ ತಪ್ಪುಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು, ಬಿಎಂಆರ್ಸಿಎಲ್ ದಂಡದ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದುವರೆಗೂ ಇದ್ದ ದಂಡದ ಪ್ರಮಾಣವನ್ನು ಏಕಾಏಕಿ ನಾಲ್ಕು ಪಟ್ಟು ಹೆಚ್ಚಿಸಿ 20,000 ಸಾವಿರ ರೂಪಾಯಿಗೆ ಹೆಚ್ಚಿಸಿದೆ.
ಮೊಬೈಲ್ ಬಳಸುವ ಮುನ್ನ ಹುಷಾರ್, ಹೆಚ್ಚಾಯ್ತು ದಂಡ!
ಪ್ರಯಾಣಿಕರಿಗೆ ಪ್ರವೇಶ ಇಲ್ಲದ ಮೆಟ್ರೋ ಆವರಣದಲ್ಲಿ ಪ್ರವೇಶ ಮಾಡಿದರೆ 5 ಸಾವಿರ ದಂಡ ವಿಧಿಸಲಾಗುತ್ತದೆ. ಇದಕ್ಕೆ ಮೆಟ್ರೋ ಆವರಣದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ಮಾಡುವುದು, ರ್ಯಾಲಿ ಮಾಡುವುದು, ಮೆಟ್ರೋ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು, ಪೋಸ್ಟರ್ ಅಥವಾ ಬರವಣಿಗೆಯನ್ನು ಪ್ರದರ್ಶನ ಮಾಡುವಂತಹ ಚಟುವಟಿಕೆಗಳನ್ನು ನಡೆಸಿದರೆ 10,000 ಸಾವಿರ ದಂಡ ಪಾವತಿ ಮಾಡಬೇಕಿದೆ. ಕೇವಲ ಭದ್ರತೆ ಮಾತ್ರವಲ್ಲದೆ, ಮೆಟ್ರೋದಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರಿಗೆ ಸಮಸ್ಯೆ ಅಥವಾ ಕಿರಿಕಿರಿ ಆಗುವಂತೆ ನಡೆದುಕೊಂಡರೆ ಅಥವಾ ಹೆಡ್ ಫೋನ್ ಹಾಕಿಕೊಳ್ಳದೆ ಮೊಬೈಲ್ ಫೋನ್ ನಲ್ಲಿ ವಿಡಿಯೋ ನೋಡುವುದು ಅಥವಾ ಕಾನೂನುಬಾಹಿರ ಸಾಹಿತ್ಯವನ್ನು ಮೆಟ್ರೋ ಒಳಗೆ ತೆಗೆದುಕೊಂಡು ಬಂದರೆ, ಮೆಟ್ರೋ ಆವರಣದಲ್ಲಿ ಮದ್ಯ ಸೇವಿಸಿದರೆ, ಇತರ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಇಂತಹ ತಪ್ಪುಗಳಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಮೊತ್ತವನ್ನು ಐದುಪಟ್ಟು ಹೆಚ್ಚು ಮಾಡಿ 2,500 ರೂಪಾಯಿಗೆ ಹೆಚ್ಚಿಸಲಾಗಿದೆ.
ಟಿಕೆಟ್ ತಪ್ಪುಗಳಿಗೆ ಶೇಕಡಾ 400 ರಷ್ಟು ದಂಡ ಹೆಚ್ಚಳ!
ಟಿಕೆಟ್ ವಿಚಾರದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ, ಮೋಸ ಮಾಡಿದರೆ ಕಠಿಣ ಶಿಕ್ಷೆಗಳನ್ನು ವಿಧಿಸುವ ಎಚ್ಚರಿಕೆ ನೀಡಿದೆ. ನಕಲಿ ಟಿಕೆಟ್ ನಲ್ಲಿ ಪ್ರಯಾಣಿಸಿದರೆ ಅಥವಾ ಯಾವುದೇ ಬದಲಾವಣೆ ಮಾಡಿದರೆ, ಇತರರಿಗೆ ಟಿಕೆಟ್ ವರ್ಗಾವಣೆ ಮಾಡಿದರೆ ಇಂತಹ ತಪ್ಪುಗಳಿಗೆ ಬರೋಬ್ಬರಿ 20,000 ಸಾವಿರ ವರೆಗೂ ದಂಡ ಪಾವತಿ ಮಾಡಬೇಕಿದೆ. ನಕಲಿ ಟಿಕೆಟ್ ಬಳಸಿ ಪ್ರಯಾಣ ಮಾಡಲು ಯತ್ನಿಸಿದರೆ 5,000 ರೂಪಾಯಿ, ಇತರ ಟಿಕೆಟ್ ಅಪರಾಧಗಳಿಗೆ ಗರಿಷ್ಠ 25,000 ರೂಪಾಯಿ ವರೆಗೂ ದಂಡ ವಿಧಿಸಲು ಅವಕಾಶವಿದೆ.
ಇದನ್ನೂ ಓದಿ: Bengaluru 2nd Airport: ಶಿರಾದಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ; ಸಚಿವ ವಿ. ಸೋಮಣ್ಣ
ಹೊಸ ನಿಯಮ, ತಪ್ಪಾಗಿ ದಂಡ ವಿಧಿಸಿದರೆ ಮುಂದೇನು?
ಈ ಹೊಸ ನಿಯಮಗಳ ಜೊತೆಗೆ, ಬಿಎಂಆರ್ಸಿಎಲ್ ತನ್ನ ಆಡಳಿತಾತ್ಮಕ ವಿಧಾನದಲ್ಲಿ ಗಮನಾರ್ಹ ಬದಲಾವಣೆಯನ್ನು ಕೈಗೊಂಡಿದ್ದು, ನ್ಯಾಯಾಲಯಗಳು ಮತ್ತು ದೀರ್ಘ ಕಾನೂನು ಪ್ರಕ್ರಿಯೆಗಳ ಮೂಲಕ ನಿಯಮಗಳ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವ ಕ್ರಮವನ್ನು ಕೈಬಿಟ್ಟಿದೆ. ಇದಕ್ಕೆ ಬದಲಾಗಿ ತಕ್ಷಣವೇ ನಿಲ್ದಾಣದ ಅಧಿಕಾರಿಗಳಿಗೆ ಸ್ವಯಂ ಪರಿಶೀಲನೆ ನಡೆಸಿ, ದಂಡ ವಿಧಿಸುವ ಅಧಿಕಾರವನ್ನು ನೀಡಿದೆ. ಒಂದೊಮ್ಮೆ ಅಧಿಕಾರಿಗಳು ವಿಧಿಸಿದ ದಂಡ ಸರಿಯಾಗಿಲ್ಲ ಎಂದು ಪ್ರಯಾಣಿಕರು ಭಾವಿಸಿದರೆ, ಅದನ್ನು ಉನ್ನತ ಅಧಿಕಾರಿಗಳಿಗೆ ಮೇಲ್ಮನವಿ ಮಾಡಲು ಪ್ರಯಾಣಿಕರಿಗೆ 30 ದಿನಗಳ ಕಾಲಾವಕಾಶವನ್ನು ನೀಡಿದೆ. ಈ ಮನವಿಗಳನ್ನು ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿ 60 ದಿನಗಳಲ್ಲಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಎನ್ಡಿ ಟಿವಿ ವರದಿ ಮಾಡಿದೆ.














