ಹಾಸನ: ಮಾಜಿ ಪ್ರಧಾನಿ ದೇವೇಗೌಡರ (HD Devegowda) ಯಶಸ್ಸಿಗೆ ಹೆಗಲಾಗಿದ್ದ ಪತ್ನಿ ಚೆನ್ನಮ್ಮ (Chennamma) ವಿಧಿವಶರಾಗಿದ್ದಾರೆ. ಪತ್ನಿ ಅಗಲಿಕೆ ದೇವೇಗೌಡರಿಗೆ ಬರಸಿಡಿಲು ಬಡಿದಂತಾಗಿದೆ.
ಜೀವದ ಒಡತಿಯನ್ನ ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ರಾಜಕೀಯದ (Politics) ಬಿರುಗಾಳಿಯಲ್ಲೂ ಬೆನ್ನೆಲುಬಾಗಿ ನಿಂತಿದ್ದ ಮೌನ ಶಕ್ತಿ. ರಾಜಕಾರಣದ ಹೆಮ್ಮರವಾಗಿ ನಿಂತ ಗೌಡರ ಒಡನಾಡಿ. ರಾಜಕಾರಣದಲ್ಲಿ ದೇವೇಗೌಡ ಯೋಗ ಎಷ್ಟಿತ್ತೋ, ಅಷ್ಟೇ ಚೆನ್ನಮ್ಮನವರ ತ್ಯಾಗವೂ ಇತ್ತು. ಜೀವನದುದ್ದಕ್ಕೂ ಜೊತೆ ಜೊತೆಯಾಗಿ ನಡೆದ ಚೆನ್ನಮ್ಮ, ಇದೀಗ ದೇವೇಗೌಡರನ್ನ ಒಂಟಿಯಾಗಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಅಪರೂಪದ ದಾಂಪತ್ಯದ ಪಯಣದ ಸುದೀರ್ಘ ಕೊಂಡಿ ಕಳಚಿದೆ. 7 ದಶಕಗಳ ಜೊತೆಗಾಗಿ ಒಲ್ಲದ ಮನಸ್ಸಲ್ಲಿ ಮರೆಯಾಗಿದ್ದಾರೆ. 89ನೇ ವಯಸ್ಸಲ್ಲಿ ಚೆನ್ನಮ್ಮ ತಮ್ಮ ಜೀವನಯಾನ ಮುಗಿಸಿದ್ದಾರೆ. ಪತಿ ದೇವೇಗೌಡರ ಮುಖ ದಿಟ್ಟಿಸಿ ನೋಡುತ್ತಲೇ ಕೊನೆಯುಸಿರೆಳೆದಿದ್ದಾರೆ. ಕಳೆದ 4 ದಿನಗಳಿಂದ ಚೆನ್ನಮ್ಮ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ಐಸಿಯುನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ರು. ವೈದ್ಯರು ಅದೆಷ್ಟೇ ಪ್ರಯತ್ನ ಪಟ್ರೂ ಪ್ರಯೋಜನ ಆಗಲಿಲ್ಲ. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ 4 ಗಂಟೆಗೆ ಚೆನ್ನಮ್ಮ ವಿಧಿವಶರಾಗಿದ್ದಾರೆ.
ಇದನ್ನೂ ಓದಿ: Gruhalakshmi Scheme: ಈ ತಪ್ಪು ಮಾಡಿದ್ರೆ 2000 ರೂಪಾಯಿ ಸಿಗಲ್ಲ! ಗೃಹಲಕ್ಷ್ಮಿಯರಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ
ದೇವೇಗೌಡರ ದಂಪತಿ ನಡುವಿನ ಪ್ರೀತಿ ಎಂಥದ್ದು ಅನ್ನೋದಕ್ಕೆ ಇಡೀ ಪ್ರಪಂಚವೇ ಸಾಕ್ಷಿಯಾಗಿದೆ. ಒಟ್ಟೊಟ್ಟಿಗೆ ಪಯಣ ಮಾಡೋ ಅದೆಷ್ಟೋ ಕನಸು ಬಾಡಿರಲಿಲ್ಲ. ಪತ್ನಿಯನ್ನ ಕಳಿಸಿ ಕೊಡಲು ಗೌಡರು ತಯಾರಿರಲಿಲ್ಲ. ಆದ್ರೆ ಯಾವಾಗ ಪತ್ನಿ ಬದುಕಲ್ಲ ಅನ್ನೋದು ಗೊತ್ತಾಯ್ತೋ, ಗೌಡ್ರು ಅತ್ಯಂತ ಭಾವುಕರಾಗಿ ಬಿಳ್ಕೊಡುಗೆ ಕೊಟ್ಟಿದ್ದಾರೆ. ಮುತ್ತೈದೆಯಾಗಿಯೇ ಬಾಳ್ಬೇಕು. ಕಟ್ಕೊಂಡ್ ಗಂಡನ ಎದುರೇ ಜೀವ ಬಿಡ್ಬೇಕು ಅನ್ನೋ ಆಸೆ ಈಡೇರಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಪತ್ನಿ ಹಣೆಗೆ ಕುಂಕುಮ ಇಟ್ಟು, ತಲೆಗೆ ಹೂ ಮುಡಿಸಿದ್ರು. ಇದೇ ವೇಳೆ ಚೆನ್ನಮ್ಮನ ಮುಖವನ್ನೇ ದಿಟ್ಟಿಸಿ ನೋಡಿ ದೇವೇಗೌಡ್ರು ಕಣ್ಣೀರಿಟ್ಟಿದ್ರು.
ಅಂತ್ಯಕ್ರಿಯೆ ಬಗ್ಗೆ ಇಂಚಿಂಚು ಮಾಹಿತಿ ಪಡೆದ ದೇವೇಗೌಡ್ರು
ನಾಳೆ ಚೆನ್ನಮ್ಮ ಅಂತ್ಯಕ್ರಿಯೆ ಹಿನ್ನೆಲೆ ದೇವೇಗೌಡರು ಇಂದು ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುತ್ರಿ ಶೈಲಜಾ ಮತ್ತು ಪುತ್ರ ಹೆಚ್ಡಿ ರೇವಣ್ಣ ಅವರ ಜೊತೆ ಆಗಮಿಸಿದ್ದ ದೇವೇಗೌಡ್ರು, ಅಂತ್ಯಕ್ರಿಯೆ ಬಗ್ಗೆ ಇಂಚಿಂಚು ಮಾಹಿತಿ ಪಡೆದ್ರು. ಬಳಿಕ ಪುರೋಹಿತರನ್ನು ಕರೆದ ದೇವೇಗೌಡರು, ನಾಳಿನ ಅಂತ್ಯಕ್ರಿಯೆ ವಿಧಿ ವಿಧಾನಗಳ ಬಗ್ಗೆ ಮಾಹಿತಿ ಪಡೆದ್ರು.
ಪುತ್ರನ ಬಳಿ ದೇವೇಗೌಡರ ಬೇಡಿಕೆ
ನಂತರ, ರಂಗನಾಥಸ್ವಾಮಿ ದೇವಸ್ಥಾನದಿಂದ ಪೂಜೆ, ಅಭಿಷೇಕ ಮಾಡಿಸಿ ಹರದನಹಳ್ಳಿ ಶಿವನ ದೇವಸ್ಥಾನಕ್ಕೂ ಅಭಿಷೇಕ ಮಾಡಿಸಿ ಜೊತೆಗೆ ಎಲ್ಲ ದೇವರ ಆಂಜನೇಯ ಸ್ವಾಮಿ ದೇವಸ್ಥಾನದ ತೀರ್ಥ ತಂದು ಚನ್ನಮ್ಮನ ಪಾರ್ಥಿವ ಶರೀರಕ್ಕೆ ಪ್ರೋಕ್ಷಣೆ ಮಾಡಿ, ಜೊತೆಗೆ ಮೊದಲು ನಾನು ಚನ್ನಮ್ಮ ಇಬ್ಬರು ಹೊಳೆ ನರಸೀಪುರದಲ್ಲಿ ಬಾಡಿಗೆ ಮನೆಯಲ್ಲಿ ಇದ್ವಿ, ಆ ಮನೆಯ ಮುಖಾಂತರ ಮೆರವಣಿಗೆ ಹೋಗಬೇಕು. ಅಲ್ಲಿಂದ 10 ನಿಮಿಷ ನಿಂತು ನಂತರ ಅಂತ್ಯಕ್ರಿಯೆ ಜಾಗಕ್ಕೆ ತನ್ನಿ ಎಂದು ಪುತ್ರ ಹೆಚ್ಡಿ ರೇವಣ್ಣ ಜೊತೆ ದೇವೇಗೌಡರ ಜೊತೆ ಮಾತನಾಡಿದ್ದಾರೆ.
(ವರದಿ: ಆನಂದ್, ನ್ಯೂಸ್18 ಕನ್ನಡ, ಹಾಸನ)














