ಹಾಸನ: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ವಿಧಿವಶರಾಗಿದ್ದಾರೆ. ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಬಳಿಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ
(Bettada Ranganathaswamy Temple) ತಪ್ಪಲಿನಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿ-ವಿಧಾನ ನಡೆದಿದ್ದು, ಕಿರಿಯ ಪುತ್ರ ಡಾ. ರಮೇಶ್ ಅವರು ಅಂತ್ಯಸಂಸ್ಕಾರ ನಡೆಸಿದ್ರು. ಇದಕ್ಕೂ ಮುನ್ನ ಹೆಚ್ಡಿ ದೇವೇಗೌಡರು ಮತ್ತೊಮ್ಮೆ ಭಾವುಕರಾಗಿ ಕಣ್ಣೀರಿಟ್ಟು, ಅಲ್ಲಿ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿದ್ರು.
ಚೆನ್ನಮ್ಮ ಪಾರ್ಥಿವ ಶರೀರದೆದುರು ಕಣ್ಣೀರಿಟ್ಟ ದೇವೇಗೌಡರು
ಹತ್ತಲ್ಲಾ, ಇಪ್ಪತ್ತಲ್ಲ, ಬರೋಬ್ಬರಿ 72 ವರ್ಷಗಳ ಸುದೀರ್ಘ ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಬಿಟ್ಟು ಇದ್ದಿದ್ದೇ ಇಲ್ಲ, ಆದರೆ ಈಗ ಇಬ್ಬರೂ ದೂರ ದೂರ ಆಗಿದ್ದಾರೆ. ಈ ದುಃಖದಲ್ಲೇ ದೇವೇಗೌಡರು ಅಕ್ಷರಶಃ ಮಗುವಿನಂತೆ ಅತ್ತುಬಿಟ್ಟಿದ್ದಾರೆ.
ಪತ್ನಿಯನ್ನು ನೆನೆದು ಅತ್ತುಬಿಟ್ಟ ಮಾಜಿ ಪ್ರಧಾನಿ
ಚೆನ್ನಮ್ಮ ಪಾರ್ಥಿವ ಶರೀರದ ಎದುರು ದೇವೇಗೌಡರು ಅತ್ತಿದ್ದಾರೆ. ತಮ್ಮ ಅಗಲಿದ ಪತ್ನಿಯನ್ನು ನೆನೆದು, ಮಾಜಿ ಪ್ರಧಾನಿ ಕಣ್ಣೀರಾಗಿದ್ದಾರೆ. ಈ ವೇಳೆ ಅವರ ಗಂಡು ಮಕ್ಕಳು, ಸೊಸೆಯಂದಿರು, ಹೆಣ್ಣು ಮಕ್ಕಳು ಸಂತೈಸಿದ್ದಾರೆ.
ಇದನ್ನೂ ಓದಿ: Chennamma Deve Gowda: ಒಂದಲ್ಲ, ಎರಡು ಬಾರಿ ಸಾವು ಗೆದ್ದು ಬಂದಿದ್ದ ಚೆನ್ನಮ್ಮಾ! ಆ್ಯಸಿಡ್ ಹಾಕಿದ್ದವನನ್ನೇ ಕ್ಷಮಿಸಿದ್ದ ಕ್ಷಮಯಾ ಧರಿತ್ರಿ!
ಚೆನ್ನಮ್ಮನಿಂದಲೇ ನಾನು ಬೆಳವಣಿಗೆಯಾದೆ
ಬಳಿಕ ಮಾತನಾಡಿದ ದೇವೇಗೌಡರು, ಮಕ್ಕಳ ಆಸೆಯಂತೆ ಈ ಜಾಗದಲ್ಲಿ ಅಂತ್ಯಕ್ರಿಯೆ ಮಾಡ್ತಿದೀವಿ. ನಾನು ಪ್ರಧಾನಿಯಾಗಲು ರಂಗನಾಥನ ಅನುಗ್ರಹವಿದೆ, ಚೆನ್ನಮ್ಮನ ಶಕ್ತಿಯೂ ಇದೆ. ಹೀಗಾಗಿ ಈ ಸಮಯದಲ್ಲಿ ನಾನು ಆಳೋದಿಲ್ಲ. ಈ ಜಮೀನು ಕ್ರಯಕ್ಕೆ ಪಡೆದು ಅಂತ್ಯಕ್ರಿಯೆ ಮಾಡ್ತಿದ್ದೇವೆ ಎಂದಿದ್ದಾರೆ. ನಮ್ಮ ಏಳಿಗೆಯಲ್ಲಿ ಚೆನ್ನಮ್ಮನ ಪಾತ್ರ ದೊಡ್ಡದಿದೆ, ಡಾ. ಕೃಷ್ಣ ಅವರು ಜಮೀನು ವಿಚಾರದಲ್ಲಿ ಸಹಕಾರ ಕೊಟ್ಟಿದ್ದಾರೆ. ಚೆನ್ನಮ್ಮನಿಂದಲೇ ನಾನು ಬೆಳೆವಣಿಗೆಯಾದೆ ಅಂತ ಪತ್ನಿ ಚೆನ್ನಮ್ಮ ಬಗ್ಗೆ ಮಾತನಾಡುತ್ತಲೇ ಹೆಚ್ಡಿ ದೇವೇಗೌಡ ಮತ್ತೆ ಭಾವುಕರಾದರು.
ಹೊಸ ಸೀರೆ ಉಡಿಸಿ, ಅರಿಶಿನ ಕುಂಕುಮವಿಟ್ಟ ದೇವೇಗೌಡರು
ಇನ್ನು ಅಂತ್ಯಸಂಸ್ಕಾರಕ್ಕೂ ಮುನ್ನ ಒಕ್ಕಲಿಗ ಸಂಪ್ರದಾಯದಂತೆ ಚೆನ್ನಮ್ಮ ಅವರ ಅಂತಿಮ ವಿಧಿವಿಧಾನಗಳು ನಡೆಯಿತು. ಈ ವೇಳೆ ಚೆನ್ನಮ್ಮ ಅವರಿಗೆ ಸ್ನಾನ ಮಾಡಿಸಿದ ಬಳಿಕ ಹೊಸ ಸೀರೆಯುಡಿಸಿ ಪೂಜಾ ಕಾರ್ಯ ನಡೆದಿದ್ದು, ಕೊನೆಯ ಬಾರಿಗೆ ದೇವೇಗೌಡರು ಪತ್ನಿಯನ್ನ ಕಣ್ತುಂಬಿಕೊಳ್ಳುತ್ತಾ ಅರಿಶಿನ-ಕುಂಕುವಿಟ್ಟು ಪೂಜೆ ಮಾಡಿದ್ದರು.
ತಾಯಿ ಕೆನ್ನೆಗೆ ಮುತ್ತಿಟ್ಟು ಹೆಚ್ಡಿ ರೇವಣ್ಣ ವಿದಾಯ
ತಾಯಿ ಕಳೆದುಕೊಂಡು ಹೆಚ್ಡಿ ರೇವಣ್ಣ ಕಣ್ಣೀರಿಟ್ಟಿದ್ದಾರೆ. ಚೆನ್ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾಗಿನಿಂದಲೂ ಕಣ್ಣೀರು ಇಡುತ್ತಿದ್ದ ರೇವಣ್ಣ, ಇಂದು ಮತ್ತೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದಾರೆ. ಚೆನ್ನಮ್ಮ ಅವರನ್ನು ಮಣ್ಣು ಮಾಡೋಕೂ ಮುನ್ನ ಚೆನ್ನಮ್ಮ ಕೆನ್ನೆಗೆ ಮುತ್ತಿಟ್ಟ ಹೆಚ್.ಡಿ ರೇವಣ್ಣ, ಭಾವುಕ ವಿದಾಯ ಹೇಳಿದ್ದಾರೆ.
ನಮ್ಮ ತಾಯಿಯನ್ನು ಕಳೆದುಕೊಂಡಿದ್ದೇವೆ ಎಂದ ಅನಿತಾ ಕುಮಾರಸ್ವಾಮಿ
ಚೆನ್ನಮ್ಮರ ಅಂತ್ಯ ಸಂಸ್ಕಾರದ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಇಂದು ನಮ್ಮತಾಯಿಯನ್ನ ಕಳೆದುಕೊಂಡಿದ್ದೇವೆ ಎಂದರು. ನಮ್ಮ ಅತ್ತೆಯವರು ಮಕ್ಕಳು, ಮೊಕ್ಕಳೊಂದಿಗೆ ತುಂಬಾ ಸಮಯ ಕಳೆಯುತ್ತಿದ್ರು. ದೇವರ ಪೂಜೆ, ಹಬ್ಬದ ವಿಷಯಗಳಲ್ಲಿ ನಮ್ಮೆಲ್ಲರಿಗೂ ಸಲಹೆ ಕೊಡ್ತಿದ್ರು ಅಂತ ಸ್ಮರಿಸಿಕೊಂಡರು.
ಈಗ ಅವರು ಇಲ್ಲ ಎಂಬ ನೋವಿದೆ
ಮಕ್ಕಳ ಮದುವೆ ವಿಷಯದಲ್ಲಿಯೂ ಕುಲ, ಹಿನ್ನೆಲೆ ತುಂಬಾ ವಿಚಾರಿಸ್ತಿದ್ರು. ಕುಮಾರಸ್ವಾಮಿಯವರ ಜೊತೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ರು. ಆದ್ರೆ ಈಗ ಅವರು ನಮ್ಮ ಜೊತೆ ಇಲ್ಲ ಅನ್ನೋ ನೋವಿದೆ ಅಂತ ನ್ಯೂಸ್ 18 ಮುಂದೆ ಅನಿತಾ ಕುಮಾರಸ್ವಾಮಿ ನೋವು ತೋಡಿಕೊಂಡರು.














