ಚಿತ್ರದುರ್ಗ: ಸಾಮಾನ್ಯ ಕಲ್ಲು ಎಂದು ಕಾಣುತ್ತಿದ್ದ ಶಿಲೆಯೊಂದು ಇದೀಗ ಸುಮಾರು 500 ವರ್ಷಗಳ ಹಿಂದಿನ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಮತ್ತೆ ನೆನಪಿಸಿದೆ. ಚಿತ್ರದುರ್ಗ (Chitradurga)
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಭೋವಿ ಕಾಲೋನಿಯಲ್ಲಿ ವಿಜಯನಗರ ಕಾಲಘಟ್ಟಕ್ಕೆ ಸೇರಿದ ಅಪರೂಪದ ವೀರಗಲ್ಲು (Hero Stone) ಮತ್ತು ಮಾಸ್ತಿಗಲ್ಲು ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರ ಗಮನ ಸೆಳೆದಿದೆ.
ವೀರಗಲ್ಲಿನ ವಿಶೇಷತೆ ಏನು ಗೊತ್ತಾ?
ಈ ವೀರಗಲ್ಲಿನ ಶಿಲ್ಪಕಲೆ ವಿಶೇಷವಾಗಿದ್ದು, ಒಂದೇ ಸ್ಮಾರಕವನ್ನು ಮೂರು ಪ್ರತ್ಯೇಕ ಚಿತ್ರಪಟ್ಟಿಗಳಾಗಿ ಕೆತ್ತಲಾಗಿದೆ. ಪ್ರತಿಯೊಂದು ಪಟ್ಟಿಯೂ ಆ ಕಾಲದ ಸಮಾಜ, ಧೈರ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಪ್ರತಿಬಿಂಬಿಸುವಂತಿದೆ. ಕೆಳಭಾಗದ ಚಿತ್ರದಲ್ಲಿ ಕುದುರೆ ಮೇಲೆ ಸವಾರಿ ಮಾಡುತ್ತಿರುವ ವೀರನೊಬ್ಬ, ಬಲಗೈಯಲ್ಲಿರುವ ಭರ್ಚಿಯಿಂದ ರೌದ್ರಾವತಾರದ ಹುಲಿಯ ಬಾಯಿಗೆ ಇರಿಯುತ್ತಿರುವ ದೃಶ್ಯ ಕೆತ್ತಲಾಗಿದೆ. ವೀರನೊಂದಿಗೆ ಇದ್ದ ಪರಿವಾರದವರು ಸಣ್ಣ ಕತ್ತಿಗಳಿಂದ ಹುಲಿಯ ಮೇಲೆ ದಾಳಿ ನಡೆಸುತ್ತಿರುವ ಚಿತ್ರಣವೂ ಗಮನ ಸೆಳೆಯುತ್ತದೆ.
ಶ್ರೀಮಂತ ಧಾರ್ಮಿಕ ಮಹತ್ವ ಹೊಂದಿರುವ ಶಿಲ್ಪ
ಮಧ್ಯಭಾಗದ ಪಟ್ಟಿಯಲ್ಲಿ ಅದೇ ವೀರನು ತನ್ನ ಪತ್ನಿಯರೊಂದಿಗೆ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾನೆ. ಇದು ಆ ಕಾಲದ ಸಾಮಾಜಿಕ ಬದುಕಿನ ಒಂದು ನೋಟವನ್ನು ನೀಡುವಂತಿದೆ. ಮೇಲ್ಭಾಗದ ಪಟ್ಟಿಯಲ್ಲಿ ವೀರನು ಕೈಮುಗಿದು ಧ್ಯಾನಸ್ಥನಾಗಿ ಕುಳಿತಿರುವ ದೃಶ್ಯವಿದ್ದು, ಸಮೀಪದಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ಮಹಿಳೆಯ ಚಿತ್ರಣವಿದೆ. ಶಿವಲಿಂಗದ ಎದುರು ನಂದಿ ಮೊಣಕಾಲೂರಿ ಕುಳಿತಿರುವುದು, ಎರಡೂ ಬದಿಗಳಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಗಳು ಈ ಶಿಲ್ಪದ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿವೆ.
ಹುಲಿಯೊಂದಿಗೆ ಹೋರಾಡಿ ಸತ್ತವನ ಕಥೆ!
ಶಿಲ್ಪದ ಕುರಿತು ಮಾಹಿತಿ ನೀಡಿರುವ ಸಂಶೋಧಕ ಎ. ದಾದಾ ಖಲಂದರ್ ಅವರ ಪ್ರಕಾರ, ಈ ವೀರಗಲ್ಲು ಗ್ರಾಮದ ಸುತ್ತಮುತ್ತ ಹುಲಿಗಳ ಉಪಟಳ ಹೆಚ್ಚಿದ್ದ ಕಾಲವನ್ನು ಸೂಚಿಸುವ ಸಾಧ್ಯತೆಯಿದೆ. ದನಗಳನ್ನು ರಕ್ಷಿಸುವ ವೇಳೆ ಹುಲಿಯೊಂದಿಗೆ ಹೋರಾಡಿ ವೀರಮರಣ ಹೊಂದಿದ ಯೋಧನ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಿರಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ವಿಜಯನಗರ ಕಾಲಘಟ್ಟದ ದೇಗುಲದ ಅವಶೇಷಗಳ ಪತ್ತೆ
ಇದನ್ನೂ ಓದಿ: Sanduru Excavation: ಬಳ್ಳಾರಿ ಕಾಡಿನಲ್ಲಿ 10 ಸಾವಿರ ವರ್ಷದ ರಹಸ್ಯ ಬಯಲು! ಕಾರ್ಬನ್ ಡೇಟಿಂಗ್ ಹೇಳಿದ ಅಚ್ಚರಿಯ ಸತ್ಯ
ಇದೇ ಪ್ರದೇಶದಲ್ಲಿ ವೀರಮಹಾಸತಿ ಗಲ್ಲುಗಳು, ಹನುಮಂತ ದೇವಾಲಯದ ಆವರಣದಲ್ಲಿ ಯುದ್ಧದ ವೀರಗಲ್ಲು, ಶಿಲಾಶಾಸನ ಹಾಗೂ ಮಾರಮ್ಮ ದೇವಿ ಪೂಜಾರಿಯ ಮನೆಯ ಹಿಂಭಾಗದಲ್ಲಿ ವಿಜಯನಗರ ಕಾಲಘಟ್ಟದ ದೇವಾಲಯದ ಅವಶೇಷಗಳೂ ಪತ್ತೆಯಾಗಿವೆ. ಗರ್ಭಗುಡಿ, ಅಂತರಾಳ, ದ್ವಾರಬಾಗಿಲು ಮತ್ತು ಗೋಪುರದ ಕುರುಹುಗಳು ಕಂಡುಬಂದಿದ್ದು, ದೇವಾಲಯ ಕಾಲಕ್ರಮೇಣ ನಾಶವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಒಂದೇ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಹಲವು ಐತಿಹಾಸಿಕ ಪುರಾವೆಗಳು ಬೆಳಕಿಗೆ ಬಂದಿರುವುದು ಇತಿಹಾಸ ಅಧ್ಯಯನಕ್ಕೆ ಹೊಸ ಆಯಾಮ ನೀಡಿದ್ದು, ಈ ಪ್ರದೇಶದ ಪುರಾತತ್ವ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.














