ತಮಿಳು ಚಿತ್ರರಂಗದಲ್ಲಿ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಜನ ನಾಯಗನ್ (Jana Nayagan) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಟ ವಿಜಯ್ (Vijay) ಅಭಿನಯಿಸಿರುವ ಈ ಚಿತ್ರ ಈಗಾಗಲೇ
ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಬಿಡುಗಡೆಗೂ ಮುನ್ನವೇ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈ ನಡುವೆ ಸಿಂಗಾಪುರ ಮೂಲದ ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಅರ್ಧ ದಿನದ ರಜೆ ಘೋಷಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜನ ನಾಯಗನ್ ಚಿತ್ರಕ್ಕೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ನಿರ್ಮಾಣವಾಗಿದೆ. ರಾಜಕೀಯ ಪ್ರವೇಶದ ಬಳಿಕ ವಿಜಯ್ ಅಭಿನಯಿಸಿರುವ ಮೊದಲ ಸಿನಿಮಾ ಇದಾಗಿದ್ದು, ನಟನಾಗಿ ಅವರ ಕೊನೆಯ ಚಿತ್ರ ಎನ್ನುವ ಕಾರಣಕ್ಕೂ ಅಭಿಮಾನಿಗಳಲ್ಲಿ ವಿಶೇಷ ಉತ್ಸಾಹ ಮೂಡಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಎಂಬ ಕಾರಣದಿಂದ ದೇಶ ವಿದೇಶಗಳಲ್ಲಿರುವ ವಿಜಯ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
Singapore 🇸🇬 based company just gave all their employees a half-day off so they could celebrate and catch Thalapathy Vijay’s #JanaNayagan in theatres !✨ #ThalapathyVijay #Vijay #JanaNayaganFDFS pic.twitter.com/d7iq3wxSYL
— Singapore Thalapathy Vijay Fans Club 🇸🇬 (@SG_TVFC) July 22, 2026
ಹಾಗೆಯೇ ಜನ ನಾಯಗನ್ ಸಿನಿಮಾ ಈ ವರ್ಷದ ಆರಂಭದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಪ್ರಕ್ರಿಯೆ ವಿಳಂಬವಾಗಿದ್ದು, ಆನ್ಲೈನ್ನಲ್ಲಿ ಚಿತ್ರದ ಕೆಲವು ದೃಶ್ಯಗಳು ಸೋರಿಕೆಯಾಗಿದ್ದ ಹಿನ್ನೆಲೆ ಬಿಡುಗಡೆ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿತ್ತು. ಇತ್ತೀಚೆಗೆ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣ ಪಡೆದುಕೊಂಡಿದ್ದು, ಬಿಡುಗಡೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಇದನ್ನೂ ಓದಿ: Aamir Khan: ಮನೆ ಇಲ್ಲ, ಎರಡು ಹೊತ್ತು ಊಟವೂ ಇಲ್ಲ; ಆಮಿರ್ ಖಾನ್ ಸಹೋದರನ ಬಗ್ಗೆ ಮಾಜಿ ಪತ್ನಿಯ ಶಾಕಿಂಗ್ ಹೇಳಿಕೆ
ಹೀಗಿರುವಾಗ ಜನ ನಾಯಗನ್ ಬಿಡುಗಡೆಯ ಸಂಭ್ರಮದಲ್ಲಿ ಸಿಂಗಾಪುರ ಮೂಲದ ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ವಿಶೇಷ ಉಡುಗೊರೆಯಾಗಿ ಅರ್ಧ ದಿನದ ರಜೆ ಘೋಷಿಸಿದೆ. ಕಂಪನಿಯ ಪ್ರಕಟಣೆಯ ಪ್ರಕಾರ, ಸಿನಿಮಾ ಬಿಡುಗಡೆಯ ದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಚೇರಿ ಕಾರ್ಯನಿರ್ವಹಿಸುವುದಿಲ್ಲ. ಮಧ್ಯಾಹ್ನದ ನಂತರ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ವೈರಲ್ ಆದ ಕಂಪನಿಯ ನೋಟಿಸ್
ಕಂಪನಿ ಹೊರಡಿಸಿರುವ ಅಧಿಕೃತ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಶೇಷವಾಗಿ ವಿಜಯ್ ಅಭಿಮಾನಿಗಳು ಈ ಪ್ರಕಟಣೆಯನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ಕಂಪನಿಯ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Jana Nayagan: ಜನ ನಾಯಗನ್ ಸಿನಿಮಾವನ್ನು ವಿಜಯ್ ರಾಜಕೀಯಕ್ಕಾಗಿ ಬೇಕೆಂದೇ ಲೀಕ್ ಮಾಡಲಾಗಿತ್ತಾ? ಡೈರೆಕ್ಟರ್ ಶಾಕಿಂಗ್ ರಿಯಾಕ್ಷನ್
ಇನ್ನು ನಟ ವಿಜಯ್ ಅವರಿಗೆ ತಮಿಳುನಾಡಿನಲ್ಲಿ ಮಾತ್ರವಲ್ಲ, ಭಾರತ ಸೇರಿದಂತೆ ವಿದೇಶಗಳಲ್ಲಿಯೂ ದೊಡ್ಡ ಅಭಿಮಾನಿ ಬಳಗವಿದೆ. ಅವರ ಸಿನಿಮಾಗಳು ಬಿಡುಗಡೆಯಾಗುವ ಪ್ರತಿ ಬಾರಿ ವಿಶೇಷ ಪ್ರದರ್ಶನಗಳು, ಸಂಭ್ರಮಾಚರಣೆಗಳು ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ ಸಂಗತಿಯಾಗಿದೆ.
ಈ ಬಾರಿ ಜನ ನಾಯಗನ್ ಬಿಡುಗಡೆಯೂ ಅದಕ್ಕೆ ಹೊರತಾಗಿಲ್ಲ. ಹಲವು ದೇಶಗಳಲ್ಲಿ ಅಭಿಮಾನಿಗಳು ಮೊದಲ ದಿನದ ಮೊದಲ ಪ್ರದರ್ಶನ ವೀಕ್ಷಿಸಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.














