ದೆಹಲಿ: ನೀಟ್ ಪರೀಕ್ಷೆ (NEET Exam) ಅಕ್ರಮ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar) ಪ್ರಶ್ನೆ ಪತ್ರಿಕೆ ಸೋರಿಕೆ (Question Paper Leak)
ಖಂಡಿಸಿ ಸಿಜೆಪಿ ಪಾರ್ಟಿಯ (CJP) ಪ್ರತಿಭಟನೆ ಮುಂದುವರಿದಿದೆ. ಅಲ್ಲದೇ ವಿಪಕ್ಷಗಳು ಸಹ ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾವೆ. ಸದ್ಯ, ಪರಿಸ್ಥಿತಿ ಹೀಗಿರುವಾಗಲೇ ಸೋನಮ್ ವಾಂಗ್ಚುಕ್ (Sonam Wangchuk) ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈ ಒಂದು ಬೇಡಿಕೆಯನ್ನು ಈಡೇರಿಸಿದರೆ ಉಪವಾಸ ಸತ್ಯಾಗ್ರಹವನ್ನು ಕೈಬಿಡುತ್ತೇನೆ ಎಂದು ಹೇಳಿದ್ದಾರೆ.
ಸೋನಂ ವಾಂಗ್ಚುಕ್ ಬೇಡಿಕೆ ಏನು?
ಪರಿಸರ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟ ಭರವಸೆ ನೀಡಿದರೆ ಮಾತ್ರ ನಾನು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುತ್ತೇನೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರನ್ನು ಉದ್ದೇಶಿಸಿ ಅವರು ಈ ಪತ್ರವನ್ನು ಬರೆದಿದ್ದು, ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Rahul Gandhi: ವಿದ್ಯಾರ್ಥಿಗಳ ಮೇಲೆ ದಾಳಿ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ! 3 ಡಿಮ್ಯಾಂಡ್ಗಳನ್ನಿಟ್ಟ ವಿಪಕ್ಷ ನಾಯಕ
ನ್ಯಾಯಸಮ್ಮತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ಯಾವುದೇ ಸಂದರ್ಭದಲ್ಲೂ ಅವರ ವಿರುದ್ಧ ಯಾವುದೇ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂದು ಸರ್ಕಾರ ಮೊದಲು ಲಿಖಿತ ಭರವಸೆ ನೀಡಬೇಕೆಂದು ಸೋನಮ್ ವಾಂಗ್ಚುಕ್ ಆಗ್ರಹಿಸಿದ್ದಾರೆ. ಆ ಭರವಸೆ ಸಿಗುವವರೆಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯಿಂದಲೇ ಸೋನಂ ಉಪವಾಸ ಸತ್ಯಾಗ್ರಹ!
ನೀಟ್ ಅಕ್ರಮ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ಇನ್ನು, ಹೋರಾಟದ ಭಾಗವಾಗಿ ಸೋನಮ್ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ. ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಜಂತರ್ ಮಂತರ್ನಿಂದ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ವಾಂಗ್ಚುಕ್ ತಮ್ಮ ಉಪವಾಸವನ್ನು ಕೈಬಿಡದೇ ಮುಂದುವರೆಸಿದ್ದಾರೆ.
ಇನ್ನು, ಮೂಲಗಳ ಪ್ರಕಾರ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಮಂಗಳವಾರ ರಾತ್ರಿ ಮೇದಾಂತ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋನಮ್ ವಾಂಗ್ಚುಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಸಮಸ್ಯೆಯನ್ನು ಚರ್ಚಿಸುವ ಬಗ್ಗೆ ಸರ್ಕಾರ ಪರಿಗಣಿಸುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಜಂತರ್ ಮಂತರ್ನಲ್ಲಿ ಮುಂದುವರಿದ ಪ್ರತಿಭಟನೆ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ಪ್ರತಿಭಟನೆ ಮುಂದುವರಿದಿದೆ. ಇಂದು ಸಹ ಸಾವಿರಾರು ಪ್ರತಿಭಟನಾಕಾರರು ಜಂತರ್ ಮಂತರ್ಗೆ ಆಗಮಿಸಿ ಸಿಜೆಪಿ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಸಿಜೆಪಿ ವಕ್ತಾರ ಆಶುತೋಷ್ ರಂಕಾ ಮಾತನಾಡಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಾವು ಜಂತರ್ ಮಂತರ್ ತೊರೆಯುವುದಿಲ್ಲ ಎಂದಿದ್ದಾರೆ.














