ಐಪಿಎಲ್ (IPL) ಶುರು ಮಾಡುವ ಮೂಲಕ ಕ್ರಿಕೆಟ್ (Cricket) ಜಗತ್ತನ್ನೇ ಬದಲಾಯಿಸಿದ ಲಲಿತ್ ಮೋದಿ (Lalit Modi) ಭಾರತ (India) ತೊರೆದು ಬರೋಬ್ಬರಿ 16 ವರ್ಷಗಳೇ ಕಳೆದಿವೆ. ದೇಶದಲ್ಲಿ ಹಲವು
ಕಾನೂನು ಹೋರಾಟ ಹಾಗೂ ಕೇಸ್ಗಳನ್ನು ಎದುರಿಸುತ್ತಿದ್ದ ಅವರು ಇಷ್ಟು ದಿನ ವಿದೇಶದಲ್ಲೇ ತಲೆಮರೆಸಿಕೊಂಡಿದ್ದರು. ಆದರೆ ಈಗ ಅಪೀಲೇಟ್ ಟ್ರಿಬ್ಯುನಲ್ (Appellate Tribunal) ನೀಡಿರುವ ಒಂದು ಮಹತ್ವದ ತೀರ್ಪು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದು, ಲಲಿತ್ ಮೋದಿ ಅವರಿಗೆ ಬಿಗ್ ರಿಲೀಫ್ ನೀಡಿದೆ.
ಬರೋಬ್ಬರಿ 16 ವರ್ಷಗಳ ನಂತರ ಮರಳಿ ಭಾರತಕ್ಕೆ ಬರಲು ಲಲಿತ್ ಮೋದಿ ಸಜ್ಜಾಗಿದ್ದಾರೆ. ಹಾಗಾದ್ರೆ ಲಲಿತ್ ಮೋದಿ ಭಾರತಕ್ಕೆ ವಾಪಸ್ ಬರಲು ಹಾದಿ ಸುಲಭವಾಗಿದ್ದು ಹೇಗೆ? ಅವರಿಗೆ ಸಿಕ್ಕ ಆ ದೊಡ್ಡ ರಿಲೀಫ್ ಆದ್ರೂ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕೋರ್ಟ್ ನೀಡಿದ ಆ ಮಹತ್ವದ ತೀರ್ಪೇನು?
2009 ರ ಐಪಿಎಲ್ ದಕ್ಷಿಣ ಆಫ್ರಿಕಾ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ ಅವರಿಗೆ ಅಪೀಲೇಟ್ ಟ್ರಿಬ್ಯುನಲ್ನಿಂದ ಭಾರೀ ನೆಮ್ಮದಿ ಸಿಕ್ಕಿದೆ. ಜಾರಿ ನಿರ್ದೇಶನಾಲಯ ಮೋದಿ ವಿರುದ್ಧ ಮಾಡಿದ್ದ ಬಹುತೇಕ ಆರೋಪಗಳನ್ನು ಮತ್ತು ವಿಧಿಸಿದ್ದ ದಂಡಗಳನ್ನು ಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ: Asian Games 2026: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯಕ್ಕೆ ಮೂಹರ್ತ ಫಿಕ್ಸ್? ಯಾವಾಗ? ಎಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ
ಲಲಿತ್ ಮೋದಿ ಮೇಲಿದ್ದ ಆರೋಪಗಳೇನು?
2009 ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ಇದ್ದಿದ್ದರಿಂದ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ವಿದೇಶಕ್ಕೆ ಹಣ ವರ್ಗಾವಣೆ ಮಾಡುವಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಮುಂಚಿತವಾಗಿ ಅನುಮತಿ ಪಡೆದಿಲ್ಲ ಎಂದು ಆರೋಪಿಸಿ ED ತನಿಖೆ ಆರಂಭಿಸಿತ್ತು. ಆದರೆ ಈಗ ತೀರ್ಪು ನೀಡಿರುವ ಸಫೆಮಾ ಅಡಿಯಲ್ಲಿನ ಅಪೀಲೇಟ್ ಟ್ರಿಬ್ಯುನಲ್, ಜುಲೈ 16 ರಂದೇ ಪ್ರಮುಖ ತೀರ್ಪು ಪ್ರಕಟಿಸಿದ್ದು, ಈ ಪ್ರಕರಣದಲ್ಲಿ ಮೋದಿ ಅವರು ಫೆಮಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದಕ್ಕೆ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಡಿ ತನಿಖೆ ಉಲ್ಟಾ ಆಗಿದ್ದು ಹೇಗೆ?
ಕೋರ್ಟ್ನ ಈ ಆದೇಶ ಲಲಿತ್ ಮೋದಿ ಅವರಿಗೆ ಸಿಕ್ಕ ಅತಿ ದೊಡ್ಡ ಗೆಲುವಾಗಿದೆ. ಏಕೆಂದರೆ ED ಕಟ್ಟಿದ್ದ ಪ್ರಕರಣದ ಅಡಿಪಾಯವನ್ನೇ ಟ್ರಿಬ್ಯುನಲ್ ತಳ್ಳಿಹಾಕಿದೆ. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲು ಕಳುಹಿಸಲಾದ ವಿದೇಶಿ ಹಣದ ವರ್ಗಾವಣೆಯು ‘ಕರೆಂಟ್ ಅಕೌಂಟ್ ಟ್ರಾನ್ಸಾಕ್ಷನ್’ ಆಗಿತ್ತೇ ಹೊರತು ‘ಕ್ಯಾಪಿಟಲ್ ಅಕೌಂಟ್ ಟ್ರಾನ್ಸಾಕ್ಷನ್’ ಆಗಿರಲಿಲ್ಲ ಎಂದು ಕೋರ್ಟ್ ಹೇಳಿದೆ. ಇದರಿಂದಾಗಿ ಈ ಹಿಂದೆ ಇಡಿ ಮಾಡಿದ್ದ ತನಿಖಾ ವರದಿಗಳು ಸಂಪೂರ್ಣವಾಗಿ ಉಲ್ಟಾ ಆಗಿವೆ.
ಲಲಿತ್ ಮೋದಿ ಹೇಳಿದ್ದೇನು?
ಈ ತೀರ್ಪಿನ ನಂತರ ಪ್ರತಿಕ್ರಿಯಿಸಿರುವ ಲಲಿತ್ ಮೋದಿ, “ಕಳೆದ 16 ವರ್ಷಗಳಿಂದ ನಾನು ಸತ್ಯಕ್ಕಾಗಿ ಹೋರಾಡುತ್ತಿದ್ದೇನೆ. ಕೊನೆಗೂ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ನನ್ನ ಪರವಾಗಿ ತೀರ್ಪು ಬಂದಿರುವುದಕ್ಕೆ ತುಂಬಾನೇ ಖುಷಿಯಾಗಿದೆ” ಎಂದು ಹೇಳಿದ್ದಾರೆ. ತಾವೂ ಕೇವಲ ಐಪಿಎಲ್ ಒಳಿತಿಗಾಗಿ ಮಾತ್ರ ಯೋಚಿಸುತ್ತಿದ್ದಾಗಿ ಹೇಳಿರುವ ಮೋದಿ, ಈಗ ಆ ಕಹಿ ಅಧ್ಯಾಯ ಮುಗಿದಿದ್ದು ಹೊಸ ಜೀವನದ ಕಡೆ ಮುಖ ಮಾಡಿದ್ದೇನೆ ಎಂದಿದ್ದಾರೆ.
ಭಾರತಕ್ಕೆ ಬರೋದು ಯಾವಾಗ?
ಬಿಸಿಸಿಐ, ಇನ್ಕಮ್ ಟ್ಯಾಕ್ಸ್ ಹಾಗೂ ಇಡಿ ತನಿಖೆಗಳಿಂದ ಬೇಸತ್ತು 2010 ರಲ್ಲಿ ದೇಶ ಬಿಟ್ಟು ಹೋಗಿದ್ದ ಐಪಿಎಲ್ನ ಈ ಅಸಲಿ ರೂವಾರಿ, 16 ವರ್ಷಗಳ ಸುದೀರ್ಘ ವನವಾಸ ಮುಗಿಸಿ ಮರಳಿ ಸ್ವದೇಶಕ್ಕೆ ಬರುತ್ತಿರುವುದು ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೇ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತಾವು ಭಾರತಕ್ಕೆ ಮರಳಲಿರುವುದಾಗಿ ಲಲಿತ್ ಮೋದಿ ಘೋಷಿಸಿದ್ದಾರೆ.
ಲಲಿತ್ ಮೋದಿ ಭಾರತಕ್ಕೆ ಮರಳಲು ತಡವಾಗುತ್ತಿರುವುದಕ್ಕೆ ಮತ್ತೊಂದು ಕೌಟುಂಬಿಕ ಕಾರಣವೂ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಅವರ ಮಗಳಿಗೆ ಮಗು ಜನಿಸಲಿದ್ದು, ತಾವು ತಾತನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಆ ಎಲ್ಲಾ ಜವಾಬ್ದಾರಿಗಳು ಮುಗಿದ ಬಳಿಕ, ಅಂದರೆ ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿ ವೇಳೆಗೆ ಅವರು ಭಾರತದ ಮಣ್ಣಿಗೆ ಕಾಲಿಡಲಿದ್ದಾರೆ.
(ವರದಿ: ಚೈತ್ರಾ ಹರೀಶ್, ನ್ಯೂಸ್ 18 ಕನ್ನಡ, ಬೆಂಗಳೂರು)














