ಚಿಕ್ಕಮಗಳೂರು: ಫೇಸ್ಬುಕ್ ಸ್ಕ್ರೋಲ್ (Facebook) ಮಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಒಂದು ಜಾಹೀರಾತು… ಅದರಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಟ್ರೇಡಿಂಗ್
ಬಗ್ಗೆ ಮಾತನಾಡುತ್ತಿರುವಂತೆ ಕಾಣಿಸಿತು. ಅದು ನಿಜವೆಂದು ನಂಬಿ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಕೊನೆಗೆ ₹14.67 ಲಕ್ಷ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆ (Cyber Crime Police Station) ವ್ಯಾಪ್ತಿಯಲ್ಲಿ ದಾಖಲಾಗಿರುವ ಈ ಪ್ರಕರಣ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಹೂಡಿಕೆ ಜಾಹೀರಾತುಗಳ ಅಪಾಯವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಒಂದು ಕ್ಲಿಕ್. ಆರಂಭವಾಯಿತು ವಂಚನೆಯ ಆಟ
ಪೊಲೀಸರ ಮಾಹಿತಿ ಪ್ರಕಾರ, ಫೇಸ್ಬುಕ್ನಲ್ಲಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಟ್ರೇಡಿಂಗ್ ಹೂಡಿಕೆ ಕುರಿತು ಮಾತನಾಡುತ್ತಿರುವಂತೆ ತೋರಿಸುವ ಜಾಹೀರಾತು ಕಾಣಿಸಿಕೊಂಡಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಒಂದು ಆ್ಯಪ್ ತೆರೆದಿದ್ದು, ಬಳಿಕ ‘ವರುಣ್ ಖನ್ನಾ’ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ ಸಂಪರ್ಕಿಸಿದ್ದಾನೆ. ಬ್ಯಾಂಕ್ ಎಫ್ಡಿಗಿಂತ ಮೂರು ಪಟ್ಟು ಹೆಚ್ಚು ಲಾಭ ಸಿಗುತ್ತದೆ ಎಂದು ನಂಬಿಸಿ ಮೊದಲಿಗೆ ₹26,600 ನೋಂದಣಿ ಶುಲ್ಕ ಪಾವತಿಸುವಂತೆ ಹೇಳಲಾಗಿದೆ.
ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ವರ್ಗಾವಣೆ
ಆರಂಭದಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡಿಸಿದ್ದ ವಂಚಕರು, ನಂತರ ಹೆಚ್ಚು ಲಾಭದ ಆಮಿಷ ತೋರಿಸಿ ಹಂತ ಹಂತವಾಗಿ ಹೆಚ್ಚಿನ ಹಣ ಹೂಡಲು ಪ್ರೇರೇಪಿಸಿದ್ದಾರೆ. ಇದನ್ನು ನಂಬಿದ ಸಂತ್ರಸ್ತರು VIXO Traders ಹಾಗೂ QUATINO FX ಹೆಸರಿನ ವಿವಿಧ ಖಾತೆಗಳಿಗೆ ಆರ್ಟಿಜಿಎಸ್ (RTGS) ಮತ್ತು ಯುಪಿಐ (UPI) ಮೂಲಕ ಒಟ್ಟು ₹14,67,241 ಹಣ ವರ್ಗಾವಣೆ ಮಾಡಿದ್ದಾರೆ.
‘ಯುಕೆ ಚಿನ್ನದ ಬಾಂಡ್’ ಹೆಸರಲ್ಲೂ ಮತ್ತಷ್ಟು ಹಣದ ಬೇಡಿಕೆ
ಇಷ್ಟಕ್ಕೂ ವಂಚಕರ ಆಟ ಅಲ್ಲೇ ನಿಂತಿಲ್ಲ. ಹಣವನ್ನು ಯುನೈಟೆಡ್ ಕಿಂಗ್ಡಮ್ (UK) ಚಿನ್ನದ ಬಾಂಡ್ಗಳಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ಸಿಗುತ್ತದೆ ಎಂದು ಹೇಳಿ ಮತ್ತಷ್ಟು ಹಣ ಹೂಡಲು ಒತ್ತಾಯಿಸಿದ್ದಾರೆ. ಸಂತ್ರಸ್ತರಿಗೆ ಅನುಮಾನ ಬಂದು ತಾವು ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, “ಕಂಪನಿಗೆ ನಷ್ಟವಾಗಿದೆ” ಎಂದು ಹೇಳಿ ಹಣ ನೀಡಲು ನಿರಾಕರಿಸಿದ್ದಾರೆ. ಇದರ ನಡುವೆಯೇ ‘ರಾಣಾ ಪ್ರತಾಪ್’ ಎಂಬ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಇನ್ನಷ್ಟು ಹಣ ಹೂಡದಿದ್ದರೆ ಸಮಸ್ಯೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೈಬರ್ ಪೊಲೀಸರಿಂದ ತನಿಖೆ, ಎಚ್ಚರಿಕೆ
ಇದನ್ನೂ ಓದಿ: Well Rescue: 60 ಅಡಿ ಆಳದ ಬಾವಿಗೆ ಬಿದ್ದ ಕಾರ್ಮಿಕ; ಮರಣದ ಅಂಚಿನಲ್ಲಿದ್ದವನಿಗೆ ಮರುಜನ್ಮ ಸಿಕ್ಕಿದ್ದಾದರೂ ಹೇಗೆ?
ಈ ಸಂಬಂಧ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಸೆಲೆಬ್ರಿಟಿಗಳು, ಉದ್ಯಮಿಗಳು ಅಥವಾ ಗಣ್ಯರ ಹೆಸರಿನಲ್ಲಿ ಬರುವ ಹೂಡಿಕೆ ಜಾಹೀರಾತುಗಳನ್ನು ಪರಿಶೀಲಿಸದೇ ನಂಬಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ಲಾಭದ ಭರವಸೆ ನೀಡುವ ಯಾವುದೇ ಹೂಡಿಕೆ ಯೋಜನೆಯಲ್ಲಿ ಹಣ ಹೂಡುವ ಮುನ್ನ ಅದರ ಅಧಿಕೃತತೆ ಖಚಿತಪಡಿಸಿಕೊಳ್ಳುವುದು ಅಗತ್ಯ. ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡುವುದು ಅಥವಾ ಅಪರಿಚಿತ ಖಾತೆಗಳಿಗೆ ಹಣ ವರ್ಗಾಯಿಸುವುದನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.














