ಹಾಸನ (ಜು.20): 72 ವರ್ಷಗಳ ದಾಂಪತ್ಯಕ್ಕೆ ಭಾವನಾತ್ಮಕ ತೆರೆ ಬಿದ್ದಿದೆ. 1954 ರಿಂದ 2026ರ ವರೆಗೂ ಪ್ರತಿ ಹಂತದಲ್ಲೂ ಜೊತೆ ಜೊತೆಯಾಗಿಯೇ ಹೆಜ್ಜೆ ಇಟ್ಟ ಮಡದಿಯನ್ನ ಕಳೆದುಕೊಂಡ ನೋವು ಮಾಜಿ
ಪ್ರಧಾನಿ ದೇವೇಗೌಡರನ್ನ (Devegowda) ಆವರಿಸಿದೆ. ಇಳಿವಯಸ್ಸಿನಲ್ಲಿ ಪತ್ನಿ ಅಗಲಿಕೆಗೆ ನೊಂದ ಜೀವ ಕಂಡು ಕರುನಾಡೇ ಕಣ್ತುಂಬಿಕೊಂಡಿದೆ. ಇನ್ನು ಚೆನ್ನಮ್ಮ ಅವರ ಕೊನೆಯ ದಿನಗಳಲ್ಲಿ ತಾವೇ ಖುದ್ದು ಪತ್ನಿಯ ಆರೈಕೆ ಮಾಡಿದ ದೇವೇಗೌಡರ ವಿಡಿಯೋಗಳು ನಿಜಕ್ಕೂ ಮನಮಿಡಿಯುವಂತಿದೆ. ಇವರ ಆದರ್ಶ ದಾಂಪತ್ಯ ಸಾಕ್ಷಿ ಎನ್ನುವಂತಿರೋ ಈ ವಿಡಿಯೋದಲ್ಲಿ ದೇವೇಗೌಡ್ರು ಪತ್ನಿಗೆ ಹೇಳಿರೋ ಒಂದು ಕೇಳಿದ್ರೆ ನಿಮ್ಮ ಕಣ್ಣಂಚಲು ನೀರು ತರಿಸುತ್ತೆ.
ಪತ್ನಿಗೆ ಕೊನೆಯ ತುತ್ತು ಕೊಟ್ಟ ದೇವೇಗೌಡ್ರು
ರಾಜಕೀಯ ಜೀವನದಲ್ಲಿ ದೇವೇಗೌಡರ ಪ್ರತಿ ಹೆಜ್ಜೆಯಲ್ಲೂ ಪತ್ನಿ ಚೆನ್ನಮ್ಮ ಅವರ ತ್ಯಾಗ, ಪ್ರೋತ್ಸಾಹ, ಬೆಂಬಲವಿತ್ತು. ಗಂಡ-ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಚೆನ್ನಮ್ಮ ಮೇಲೆ ದೇವೇಗೌಡರಿಗಿದ್ದ ಪ್ರೀತಿಗೆ ಈ ವಿಡಿಯೋಗಳೇ ಸಾಕ್ಷಿ ಅಂದ್ರು ತಪ್ಪಾಗಲ್ಲ. ಆಸ್ಪತ್ರೆಯಲ್ಲಿ ಪತ್ನಿಗೆ ತಾನೇ ತುತ್ತು ತಿನ್ನಿಸಿದ ದೇವೇಗೌಡ್ರು ನಿಜಕ್ಕೂ ಪ್ರೀತಿಗೆ ಆದರ್ಶವಾಗಿದ್ದಾರೆ.
ನಾನ್ ನಿನ್ನ ಜೊತೆ ಇರ್ಬೇಕಾ? ಬೇಡ್ವಾ?
ಆಸ್ಪತ್ರೆ ಬೆಡ್ ಮೇಲೆ ಊಟ ಬೇಡ ಅಂತ ಹಠವಿಡಿದ ಚೆನ್ನಮ್ಮಗೆ ದೇವೇಗೌಡ್ರು ಮುದ್ದಾಗಿ ಗದರಿಸಿ ನಾನ್ ನಿನ್ನ ಜೊತೆ ಇರ್ಬೇಕಾ? ಬೇಡ್ವಾ? ಅನ್ನೋ ಮಾತು ಹೇಳಿದ್ದು, ಗಂಡನ ಮಾತು ಕೇಳಿ ಮರು ಮಾತಾಡದೇ ಚೆನ್ನಮ್ಮ ಅವರು ಗೌಡರ ಕೊಟ್ಟ ತುತ್ತು ತಿಂದ ವಿಡಿಯೋ ನಿಜಕ್ಕೂ ಮನ ಮಿಡಿಯುವಂತಿದೆ.
ದೇವೇಗೌಡರ ದಾಂಪತ್ಯ ಪ್ರೀತಿಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದ್ದು, ಮದುವೆ ಅನ್ನೋದ ಪದದ ಅರ್ಥವನ್ನೇ ಕಳೆದುಕೊಳ್ತಿರೋ ಈ ಯುಗದ ಯುವ ಜೋಡಿಗಳಿಗೆ ಇವರಂಥೆ ಬದುಕಿ ಅನ್ನೋ ಎನ್ನುವ ಮಾತುಗಳು ಹರಿದಾಡ್ತಿದೆ.













