ಬೆಂಗಳೂರು: ಗ್ಯಾರಂಟಿ ಯೋಜನೆಗಳು (Guarantee Schemes) ಕಾಂಗ್ರೆಸ್ನ ಮಹಾತ್ವಾಕಾಂಕ್ಷಿ ಯೋಜನೆಗಳು. ಈ ಮಾಡೆಲ್ ರಾಜ್ಯ ಮಾತ್ರವಲ್ಲ ಇಡೀ ದೇಶಾದ್ಯಂತ ಫೇಮಸ್ ಆಗಿದ್ದಾಯ್ತು. ಅದ್ರಲ್ಲೂ
ಗೃಹಲಕ್ಷ್ಮಿ (Gruhalakshmi) ಗ್ಯಾರಂಟಿ ಮೂಲಕ ಕೋಟಿ ಕೋಟಿ ಮಹಿಳೆಯರು ಮಾಸಿಕ ಎರಡು ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಇದು ಸರ್ಕಾರದ ಖಜಾನೆ ಮೇಲೂ ಭಾರೀ ಪರಿಣಾಮ ಬೀರಿದ್ದು, ಸದ್ಯ ಪರಿಷ್ಕರಣೆಗೆ ಮುಂದಾಗಿದೆ.
ಕಳೆದ ಕೆಲ ತಿಂಗಳುಗಳಿಂದ ಗೃಹಲಕ್ಷ್ಮಿ ಗುದ್ದಾಟ ನಡೆಯುತ್ತಲೇ ಇದೆ. ಸರ್ಕಾರ ಗ್ಯಾರಂಟಿ ಪರಿಷ್ಕರಣೆಗೆ ಮುಂದಾಗ್ತಿದ್ದಂತೆ, ಫಲಾನುಭವಿಗಳಿಗೆ ಆತಂಕ ಶುರುವಾಗಿದೆ. ಗ್ಯಾರಂಟಿ ಯೋಜನೆ ಸಿಗುತ್ತಾ? ಇಲ್ವಾ? ಗೃಹಲಕ್ಷ್ಮಿ ಸಿಗಬೇಕು ಅಂದ್ರೆ ಏನು ಮಾಡ್ಬೇಕು ಅನ್ನೋ ಟೆನ್ಷನ್ ಶುರುವಾಗಿದೆ. ಹೀಗಿರುವಾಗಲೇ ಗೃಹಲಕ್ಷ್ಮಿ ಪರಿಷ್ಕರಣೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಇದನ್ನೂ ಓದಿ: Bengaluru 2nd Airport: ಶಿರಾದಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ; ಸಚಿವ ವಿ. ಸೋಮಣ್ಣ
ಬಯೋ ಮೆಟ್ರಿಕ್ ಅಥವಾ ಫೇಸಿಯಲ್ ಅಥೆಂಟಿಕೇಷನ್
ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಸಚಿವ ಸಂಪುಟ ಸಭೆ ನಡೆಸಿದರು. ಡಿಕೆಶಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಗೃಹಲಕ್ಷ್ಮಿ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಲಾಗಿದ್ದು, ಬಯೋ ಮೆಟ್ರಿಕ್ ಅಥವಾ ಫೇಸಿಯಲ್ ಅಥೆಂಟಿಕೇಷನ್ ದೃಢೀಕರಣದ ಮೂಲಕ ಫಲಾನುಭವಿಗಳ ಮರುಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ.
ಫಲಾನುಭವಿಗಳದ್ದೇ ಫೋನ್ ನಂಬರ್ ಇರಬೇಕು
ಇನ್ನು, ಸಭೆ ಬಳಿಕ ಗೃಹಲಕ್ಷ್ಮಿ ಯೋಜನೆ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಬಯೋ ಮೆಟ್ರಿಕ್ ಅಥವಾ ಫೇಸಿಯಲ್ ಅಥೆಂಟಿಕೇಷನ್ ದೃಢೀಕರಣಕ್ಕೆ 20 ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ. ಫಾರಂ ಯಾವ ರೀತಿ ಇರಬೇಕು ಎಂದು ಮೀಟಿಂಗ್ನಲ್ಲಿ ಚರ್ಚಿಸಲಾಗಿದೆ. ನಮ್ಮ ಗ್ಯಾರಂಟಿ ತಂಡ ಹೋಗಿ ಮಾಹಿತಿ ಪಡೆಯಬೇಕು. ಅವರದ್ದೇ ಫೋನ್ ನಂಬರ್ ಇರಬೇಕು, ಯಾರದ್ದೋ ಫೋನ್ ನಂಬರ್ ಕೊಟ್ಟು ಅವರಿಗೆ ಮೆಸೇಜ್ ಹೋಗಬಾರದು. ಗಂಡನ ಅಕೌಂಟ್ ಮತ್ತು ಮಕ್ಕಳ ಅಕೌಂಟ್ ಕೂಡ ಇರಬಾರದು, ಮಹಿಳೆಯರ ಅಕೌಂಟ್ಗೆ ಹೋಗಬೇಕು. ಯಾರನ್ನು ತೆಗೆಯುವ ಯೋಚನೆ ಇಲ್ಲ, ಆದ್ರೆ ನಾವು ಕೊಡುವ ಹಣ ಅವರಿಗೆ ಸರಿಯಾಗಿ ತಲುಪಬೇಕು ಎಂದು ಹೇಳಿದರು.
ಕ್ಯಾಬಿನೆಟ್ ಮೀಟಿಂಗ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಬೆಳಗ್ಗೆ ಬರದ ಪರಿಸ್ಥಿತಿ ಬಗ್ಗೆ DC ಮತ್ತು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಈಗಾಗಲೇ ಶೇಕಡಾ 60ರಷ್ಟು ಮಳೆ ಕೊರತೆ 178 ತಾಲೂಕಿನಲ್ಲಿ ಕಾಣುತ್ತಿದೆ. ಈ ಪೈಕಿ 158 ತಾಲೂಕು ಬಹಳ ಸಾಧಾರಣ ಮಳೆ ಇದೆ, ಅಧಿಕಾರಿಗಳ ಬಳಿ ಈ ಬಗ್ಗೆ ಮಾಹಿತಿ ಪಡೆದುಕೊಂಡೆ, ಕುಡಿಯುವ ನೀರಿಗೆ ಸಮಸ್ಯೆ ಇದ್ದ ಹಾಗೇ ಕಾಣಿಸ್ತಾ ಇಲ್ಲ, ರೈತರಿಗೆ ನೀರಿನ ಬಗ್ಗೆ ಆಗಾಗ ಮಾಹಿತಿ ಕೊಡಬೇಕು. ಬೆಳೆ ಹಾಕಿದ ಮೇಲೆ ನೀರು ಕೇಳಿದ್ರೆ ಗಲಾಟೆ ಆಗುತ್ತೆ. ಮೊದಲೇ ನೀರಿನ ಪರಿಸ್ಥಿತಿ ಬಗ್ಗೆ ರೈತರಿಗೆ ಹೇಳಬೇಕು. ಎಲ್ಲಾ ತಾಲೂಕುಗಳಲ್ಲಿ ಅಂತರ್ಜಲ ಬಗ್ಗೆ ಪರಿಶೀಲನೆ ಮಾಡಿದ್ದೀನಿ ಎಂದು ಹೇಳಿದರು.
(ವರದಿ: ಪ್ರಗತಿ ಶೆಟ್ಟಿ, ನ್ಯೂಸ್18 ಕನ್ನಡ, ಬೆಂಗಳೂರು)














