ಮೈಸೂರು: ಕಳೆದ ವಾರವಷ್ಟೇ ಕೊಡಗು (Kodagu) ಮತ್ತು ಕೇರಳದ (Kerala) ವೈನಾಡು ಭಾಗದಲ್ಲಿ ಮುಂಗಾರು ಅಬ್ಬರಿಸಿ ಬೊಬ್ಬರೆದ ಪರಿಣಾಮ, ಹಳೆ ಮೈಸೂರು ಭಾಗದ ಜೀವನಾಡಿಗಳಾದ ಕೆಆರ್ಎಸ್ (KRS)
ಹಾಗೂ ಕಬಿನಿ (Kabini) ಜಲಾಶಯಗಳು (Reservoirs) ಮೈದುಂಬಿಕೊಂಡಿದ್ದವು. ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 10 ಅಡಿಗೂ ಅಧಿಕ ನೀರು ಸಂಗ್ರಹಗೊಂಡು ರೈತರ (Farmer) ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ, ವರುಣ ದೇವನ ಈ ಸಡಗರ ಈಗ ಕ್ಷಣಿಕವಾಗಿದ್ದು, ಜಲಾಶಯಗಳಿಗೆ ಬರುತ್ತಿದ್ದ ಭಾರೀ ಜಲಧಾರೆ ದಿಢೀರ್ ಸೈಲೆಂಟ್ ಆಗಿದೆ.
ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಒಳಹರಿವಿನ ವಿವರ
ಕೆಆರ್ಎಸ್ ಜಲಾಶಯ (ಮಂಡ್ಯ)
ಒಟ್ಟು ಗರಿಷ್ಠ ಸಾಮರ್ಥ್ಯ: 124.80 ಅಡಿಗಳು.
ಇಂದಿನ ನೀರಿನ ಮಟ್ಟ: 92.38 ಅಡಿಗಳು.
ಒಳಹರಿವು: ಕೇವಲ 775 ಕ್ಯೂಸೆಕ್ಗೆ ಭಾರಿ ಕುಸಿತ ಕಂಡಿದೆ.
ಹೊರಹರಿವು: 2,391 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕಬಿನಿ ಜಲಾಶಯ (ಮೈಸೂರು)
ಒಟ್ಟು ಗರಿಷ್ಠ ಸಾಮರ್ಥ್ಯ: 2,284 ಅಡಿಗಳು.
ಇಂದಿನ ನೀರಿನ ಮಟ್ಟ: 2,272.23 ಅಡಿಗಳು.
ಒಳಹರಿವು: 3,330 ಕ್ಯೂಸೆಕ್ಗೆ ಇಳಿಕೆಯಾಗಿದೆ.
ಹೊರಹರಿವು: ಮುನ್ನೆಚ್ಚರಿಕೆಯಾಗಿ 500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಅನ್ನದಾತರಲ್ಲಿ ಮತ್ತೆ ಚಿಂತೆ
ಕಳೆದ ವಾರ ಸಾವಿರಾರು ಕ್ಯೂಸೆಕ್ಗಳಷ್ಟು ಮುನ್ನುಗ್ಗಿ ಬರುತ್ತಿದ್ದ ಭಾರಿ ಒಳಹರಿವು ಈಗ ಗಣನೀಯವಾಗಿ ತಗ್ಗಿರುವುದು ನಾಡಿನ ರೈತರಲ್ಲಿ ಆತಂಕ ಮರುಕಳಿಸುವಂತೆ ಮಾಡಿದೆ. ಕೊಡಗು ಹಾಗೂ ವೈನಾಡು ಭಾಗದಲ್ಲಿ ಮಳೆಯ ಪ್ರಮಾಣ ತಣ್ಣಗಾಗಿರುವುದೇ ಈ ಹಠಾತ್ ಒಳಹರಿವು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: KRS Dam: ಕೆಆರ್ಎಸ್, ಕಬಿನಿ ಜಲಾಶಯಗಳಿಗೆ ಮರುಜೀವ, ಮೈಸೂರು ಭಾಗದ ರೈತರ ಮುಖದಲ್ಲಿ ಮಂದಹಾಸ!
ಆದರೆ, ಸದ್ಯಕ್ಕೆ ಕುಡಿಯುವ ನೀರು ಹಾಗೂ ಅಗತ್ಯತೆಗಳಿಗೆ ಜಲಾಶಯಗಳಿಂದ ನೀರು ಬಿಡುಗಡೆ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಹವಾಮಾನ ಇಲಾಖೆಯು ಮಳೆ ಮತ್ತೆ ಚುರುಕುಗೊಳ್ಳುವ ಮುನ್ಸೂಚನೆ ನೀಡಿರುವುದರಿಂದ, ಜಲಾಶಯಗಳು ಶೀಘ್ರದಲ್ಲೇ ಭರ್ತಿಯಾಗಲಿ ಎಂದು ನಾಡಿನ ಜನತೆ ಪ್ರಾರ್ಥಿಸುತ್ತಿದ್ದಾರೆ.














