ಸರಿಯಾದ ಬಟ್ಟೆಯ ಆಯ್ಕೆ ಅತಿ ಮುಖ್ಯ
ಮಳೆಗಾಲದಲ್ಲಿ ಬಟ್ಟೆಯ ಆಯ್ಕೆ ಬಹಳ ಮುಖ್ಯ. ಏಕೆಂದರೆ ಒದ್ದೆಯಾದ ಬಟ್ಟೆಗಳು ಬೇಗನೆ ಒಣಗದಿದ್ದರೆ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ರೇಯಾನ್, ಪಾಲಿಯೆಸ್ಟರ್, ನೈಲಾನ್ ಮತ್ತು ಕ್ರೇಪ್ನಂತಹ ಸಿಂಥೆಟಿಕ್ ಅಥವಾ ಅರೆ-ಸಿಂಥೆಟಿಕ್ ಬಟ್ಟೆಗಳು ಅತ್ಯುತ್ತಮ
ಆಯ್ಕೆ. ಇವು ಹಗುರವಾಗಿರುತ್ತವೆ ಮತ್ತು ಒದ್ದೆಯಾದರೂ ಬೇಗನೆ ಒಣಗುತ್ತವೆ. ಜೊತೆಗೆ, ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ, ಇದರಿಂದ ಗಾಳಿಯಾಡಲು ಅನುಕೂಲವಾಗುತ್ತದೆ. ಶುದ್ಧ ಹತ್ತಿ ಮತ್ತು ಲಿನಿನ್ ಬಟ್ಟೆಗಳು ನೀರನ್ನು ಹೆಚ್ಚು ಹೀರಿಕೊಳ್ಳುತ್ತವೆ ಮತ್ತು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಅವುಗಳನ್ನು ಆದಷ್ಟು ಕಡಿಮೆ ಬಳಸುವುದು ಉತ್ತಮ. ಡೆನಿಮ್ ಮತ್ತು ವೆಲ್ವೆಟ್ನಂತಹ ದಪ್ಪ ಬಟ್ಟೆಗಳನ್ನು ಸಂಪೂರ್ಣವಾಗಿ ತಪ್ಪಿಸಿ, ಏಕೆಂದರೆ ಅವು ಒದ್ದೆಯಾದಾಗ ಭಾರವಾಗುತ್ತವೆ ಮತ್ತು ಶಿಲೀಂಧ್ರ ಸೋಂಕಿಗೆ ಕಾರಣವಾಗಬಹುದು.
ಬಣ್ಣಗಳ ಆಯ್ಕೆಯಲ್ಲಿರಲಿ ಜಾಣ್ಮೆ
ಮಳೆಗಾಲದ ಕತ್ತಲೆಯ ವಾತಾವರಣಕ್ಕೆ ಪ್ರಕಾಶಮಾನವಾದ ಬಣ್ಣಗಳು ಹೊಸ ಹುರುಪು ನೀಡುತ್ತವೆ. ಕಿತ್ತಳೆ, ಹಳದಿ, ಗುಲಾಬಿ, ನೀಲಿ ಬಣ್ಣದ ಉಡುಪುಗಳು ನಿಮ್ಮನ್ನು ಉಲ್ಲಾಸದಿಂದ ಇರುವಂತೆ ಮಾಡುತ್ತವೆ. ಒಂದು ವೇಳೆ ಕೆಸರು ಸಿಡಿಯುವ ಸಾಧ್ಯತೆ ಇರುವ ಕಡೆ ಓಡಾಡುವುದಿದ್ದರೆ, ಕಡು ನೀಲಿ, ಕಂದು ಅಥವಾ ಕಪ್ಪು ಬಣ್ಣದ ಉಡುಪುಗಳನ್ನು ಧರಿಸುವುದು ಜಾಣತನ. ಏಕೆಂದರೆ ಇವುಗಳ ಮೇಲೆ ಕಲೆಗಳು ಸುಲಭವಾಗಿ ಕಾಣಿಸುವುದಿಲ್ಲ. ಬಿಳಿ ಮತ್ತು ತಿಳಿ ಬಣ್ಣದ ಉಡುಪುಗಳನ್ನು ಆದಷ್ಟು ತಪ್ಪಿಸಿ, ಯಾಕೆಂದರೆ ಸಣ್ಣ ಕಲೆಯಾದರೂ ಎದ್ದು ಕಾಣುತ್ತದೆ ಮತ್ತು ಅವು ಪಾರದರ್ಶಕವಾಗುವ ಸಾಧ್ಯತೆಯೂ ಇರುತ್ತದೆ. ಬಣ್ಣಬಣ್ಣದ ಛತ್ರಿ ಅಥವಾ ರೈನ್ಕೋಟ್ ಬಳಸುವುದು ನಿಮ್ಮ ಸ್ಟೈಲ್ಗೆ ಮತ್ತಷ್ಟು ಮೆರುಗು ನೀಡುತ್ತದೆ.
ಶೈಲಿ ಮತ್ತು ಸೌಕರ್ಯ ಎರಡೂ ಇರಲಿ
ಮಳೆಗಾಲದಲ್ಲಿ ಉದ್ದವಾದ ಉಡುಪುಗಳು ಕೆಸರು ಮತ್ತು ನೀರಿನಿಂದ ಬೇಗನೆ ಕೊಳೆಯಾಗುತ್ತವೆ. ಆದ್ದರಿಂದ, ಮೊಣಕಾಲುದ್ದದ ಉಡುಪುಗಳು, ಸ್ಕರ್ಟ್ಗಳು, ಕ್ಯಾಪ್ರಿಗಳು ಮತ್ತು ಶಾರ್ಟ್ಸ್ ಉತ್ತಮ ಆಯ್ಕೆ. ಇವು ಚಲನೆಗೆ ಆರಾಮ ನೀಡುವುದಲ್ಲದೆ, ಕೆಸರಿನಿಂದಲೂ ದೂರವಿರುತ್ತವೆ. ಸಡಿಲವಾದ ಬಟ್ಟೆಗಳನ್ನು ಧರಿಸುವುದು ಹೆಚ್ಚು ಸೂಕ್ತ, ಏಕೆಂದರೆ ಅವು ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ ಮತ್ತು ಗಾಳಿಯಾಡಲು ಅವಕಾಶ ಮಾಡಿಕೊಡುತ್ತವೆ. ಇದರಿಂದ ಚರ್ಮದ ತುರಿಕೆ ಮತ್ತು ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಸಲ್ವಾರ್ ಕಮೀಝ್ ಧರಿಸುವವರು ಲೆಗ್ಗಿಂಗ್ಸ್ ಬದಲಿಗೆ ಮೊಣಕಾಲಿಗಿಂತ ಸ್ವಲ್ಪ ಮೇಲಿರುವ ಕುರ್ತಾಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಪಾದರಕ್ಷೆಗಳು ಮತ್ತು ಪರಿಕರಗಳು
ಮಳೆಗಾಲದಲ್ಲಿ ಚರ್ಮ ಮತ್ತು ಕ್ಯಾನ್ವಾಸ್ ಶೂಗಳನ್ನು ಬಳಸಬೇಡಿ, ಏಕೆಂದರೆ ನೀರು ಬಿದ್ದಾಗ ಅವು ಹಾಳಾಗುತ್ತವೆ ಮತ್ತು ಕೆಟ್ಟ ವಾಸನೆ ಬರುತ್ತವೆ. ಬದಲಾಗಿ, ರಬ್ಬರ್ ಚಪ್ಪಲಿಗಳು, ಫ್ಲೋಟರ್ಸ್, ಕ್ರೋಕ್ಸ್ ಅಥವಾ ಬಣ್ಣಬಣ್ಣದ ಜೆಲ್ಲಿ ಶೂಗಳನ್ನು ಬಳಸಿ. ಇವು ನೀರಿನಲ್ಲಿ ಹಾಳಾಗುವುದಿಲ್ಲ ಮತ್ತು ಸ್ವಚ್ಛಗೊಳಿಸುವುದೂ ಸುಲಭ. ನಿಮ್ಮ ವಸ್ತುಗಳನ್ನು ರಕ್ಷಿಸಲು, ಸಾಮಾನ್ಯ ಹ್ಯಾಂಡ್ಬ್ಯಾಗ್ಗಳ ಬದಲು ವಾಟರ್ಪ್ರೂಫ್ ಬ್ಯಾಗ್ಗಳನ್ನು ಬಳಸುವುದು ಉತ್ತಮ. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸ ಮತ್ತು ಬಣ್ಣಗಳ ವಾಟರ್ಪ್ರೂಫ್ ಬ್ಯಾಗ್ಗಳು ಲಭ್ಯವಿದ್ದು, ಇವು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತವೆ.
ಬಟ್ಟೆಗಳ ಕಾಳಜಿ ಮತ್ತು ಸ್ವಚ್ಛತೆ
ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗದೆ ಕೆಟ್ಟ ವಾಸನೆ ಬರುವುದು ಸಾಮಾನ್ಯ. ಇದನ್ನು ತಪ್ಪಿಸಲು, ಬಟ್ಟೆಗಳನ್ನು ತೊಳೆದ ನಂತರ ಚೆನ್ನಾಗಿ ಹಿಂಡಿ. ಸಾಧ್ಯವಾದರೆ ವಾಷಿಂಗ್ ಮಷಿನ್ನ ಡ್ರೈಯರ್ ಬಳಸಿ. ಮನೆಯೊಳಗೆ ಗಾಳಿಯಾಡುವ ಜಾಗದಲ್ಲಿ ಬಟ್ಟೆಗಳನ್ನು ಹ್ಯಾಂಗರ್ಗಳಿಗೆ ಹಾಕಿ ಒಣಗಿಸಿ. ಬಟ್ಟೆಗಳು ಬೇಗ ಒಣಗಲು ಫ್ಯಾನ್ ಗಾಳಿಯನ್ನು ಬಳಸಬಹುದು. ಬಟ್ಟೆಗಳನ್ನು ತೊಳೆಯುವಾಗ ಡಿಟರ್ಜೆಂಟ್ ಜೊತೆಗೆ ಸ್ವಲ್ಪ ವಿನೆಗರ್ ಅಥವಾ ಅಡುಗೆ ಸೋಡಾ ಬಳಸುವುದರಿಂದ ಬ್ಯಾಕ್ಟೀರಿಯಾಗಳು ನಾಶವಾಗಿ ದುರ್ವಾಸನೆ ದೂರವಾಗುತ್ತದೆ. ಸಂಪೂರ್ಣವಾಗಿ ಒಣಗಿದ ಬಟ್ಟೆಗಳನ್ನು ಮಾತ್ರ ಕಪಾಟಿನಲ್ಲಿ ಇಡಿ. ತೇವಾಂಶವನ್ನು ಹೀರಿಕೊಳ್ಳಲು ಕಪಾಟಿನ ಮೂಲೆಯಲ್ಲಿ ಕರ್ಪೂರ ಅಥವಾ ಸಿಲಿಕಾ ಜೆಲ್ ಪ್ಯಾಕೆಟ್ಗಳನ್ನು ಇಡಬಹುದು.














