ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಬಾಲಿಯ ಕಡಲತೀರಗಳು, ಸ್ವಚ್ಛ ನೀಲಿ ನೀರು ಮತ್ತು ಜಲಕ್ರೀಡೆಗಳಿಗೆ ಮನಸೋತಿದ್ದರೆ, ನೀವು ಮೊದಲು ಭೇಟಿ ನೀಡಬೇಕಾದ ಸ್ಥಳ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು. ಇಲ್ಲಿನ ರಾಧಾನಗರ ಬೀಚ್ ಏಷ್ಯಾದ ಅತ್ಯುತ್ತಮ ಕಡಲತೀರಗಳಲ್ಲಿ ಒಂದೆಂದು ಖ್ಯಾತಿ ಪಡೆದಿದೆ.
ಸ್ಪಟಿಕದಂತಹ ತಿಳಿ ನೀರು, ಬಿಳಿ ಮರಳು ಮತ್ತು ದಟ್ಟವಾದ ಹಸಿರು ಕಾಡುಗಳು ನಿಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತವೆ. ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್ನಂತಹ ಸಾಹಸ ಕ್ರೀಡೆಗಳಿಗೆ ಇಲ್ಲಿ ವಿಫುಲ ಅವಕಾಶಗಳಿವೆ. ಬಾಲಿಯಂತೆ ಇಲ್ಲಿಯೂ ಪ್ರಶಾಂತ ವಾತಾವರಣ, ಸುಂದರ ಸೂರ್ಯಾಸ್ತದ ದೃಶ್ಯಗಳು ಮತ್ತು ಐಷಾರಾಮಿ ರೆಸಾರ್ಟ್ಗಳಿದ್ದು, ನಿಮ್ಮ ರಜಾದಿನವನ್ನು ಮರೆಯಲಾಗದಂತೆ ಮಾಡುತ್ತವೆ. ಪೋರ್ಟ್ ಬ್ಲೇರ್ನಲ್ಲಿರುವ ಸೆಲ್ಯುಲಾರ್ ಜೈಲಿನ ಐತಿಹಾಸಿಕ ಮಹತ್ವವು ಈ ಪ್ರವಾಸಕ್ಕೆ ಮತ್ತೊಂದು ಆಯಾಮವನ್ನು ನೀಡುತ್ತದೆ.
ಕೇರಳ - ದೇವರ ಸ್ವಂತ ನಾಡು
ಬಾಲಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾದ ಉಬುದ್ನ ಹಸಿರು ಗದ್ದೆಗಳು ಮತ್ತು ಪ್ರಶಾಂತತೆಯನ್ನು ನೀವು ಇಷ್ಟಪಟ್ಟರೆ, ಕೇರಳ ನಿಮಗೆ ಖಂಡಿತ ಇಷ್ಟವಾಗುತ್ತದೆ. ಇಲ್ಲಿನ ಹಿನ್ನೀರು, ಅಂದರೆ 'ಬ್ಯಾಕ್ ವಾಟರ್ಸ್', ಹೌಸ್ಬೋಟ್ನಲ್ಲಿನ ವಿಹಾರವು ವಿಶಿಷ್ಟ ಅನುಭವವನ್ನು ನೀಡುತ್ತದೆ. ಮುನ್ನಾರ್ನ ಚಹಾ ತೋಟಗಳ ನಡುವೆ ನಡೆದಾಡುವುದು, ಅಲ್ಲಿನ ತಂಪಾದ ವಾತಾವರಣವನ್ನು ಆನಂದಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಕೇರಳವು ಆಯುರ್ವೇದ ಚಿಕಿತ್ಸೆ ಮತ್ತು ಯೋಗ ಕೇಂದ್ರಗಳಿಗೆ ಹೆಸರುವಾಸಿಯಾಗಿದೆ. ಬಾಲಿಯಂತೆ ಇಲ್ಲಿಯೂ ನೀವು ದೈಹಿಕ ಮತ್ತು ಮಾನಸಿಕ ವಿಶ್ರಾಂತಿಯನ್ನು ಪಡೆಯಬಹುದು. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಈ ನಾಡಿನಲ್ಲಿ ಕಥಕ್ಕಳಿ ಪ್ರದರ್ಶನಗಳು ಮತ್ತು ದೇವಸ್ಥಾನಗಳ ವಾಸ್ತುಶಿಲ್ಪವು ನಿಮ್ಮನ್ನು ಬೆರಗುಗೊಳಿಸುತ್ತವೆ.
ಗೋಕರ್ಣ, ಕರ್ನಾಟಕ
ಬಾಲಿಯ ಕಡಲತೀರಗಳ ಜೊತೆಗೆ ಅಲ್ಲಿನ ಆಧ್ಯಾತ್ಮಿಕ ವಾತಾವರಣವನ್ನು ಅನುಭವಿಸಬೇಕೆನ್ನುವವರಿಗೆ ಕರ್ನಾಟಕದ ಗೋಕರ್ಣ ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿನ 'ಓಂ' ಬೀಚ್ ತನ್ನ ವಿಶಿಷ್ಟ ಆಕಾರದಿಂದಾಗಿ ಪ್ರಸಿದ್ಧವಾಗಿದೆ. ಒಂದು ಕಡೆ ಪಶ್ಚಿಮ ಘಟ್ಟಗಳ ಹಸಿರು, ಇನ್ನೊಂದು ಕಡೆ ಅರಬ್ಬೀ ಸಮುದ್ರದ ನೀಲಿ ಅಲೆಗಳು, ಈ ಎರಡರ ಮಧ್ಯೆ ಇರುವ ಗೋಕರ್ಣದ ಕಡಲತೀರಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿನ ಮಹಾಬಲೇಶ್ವರ ದೇವಸ್ಥಾನವು ಪ್ರಮುಖ ಯಾತ್ರಾ ಕೇಂದ್ರವಾಗಿದ್ದು, 'ದಕ್ಷಿಣ ಕಾಶಿ' ಎಂದೇ ಪ್ರಸಿದ್ಧವಾಗಿದೆ. ಬೀಚ್ ಟ್ರೆಕ್ಕಿಂಗ್, ಯೋಗ ಮತ್ತು ಪ್ರಶಾಂತವಾಗಿ ಕಾಲ ಕಳೆಯಲು ಬಯಸುವವರಿಗೆ ಗೋಕರ್ಣ ಹೇಳಿ ಮಾಡಿಸಿದ ಜಾಗ. ಕಡಿಮೆ ಬಜೆಟ್ನಲ್ಲಿ ಪ್ರಯಾಣಿಸುವ ಬ್ಯಾಕ್ಪ್ಯಾಕರ್ಗಳಿಗೆ ಇದು ಸ್ವರ್ಗ.
ಕೊಡಗು, ಕರ್ನಾಟಕ
ಬಾಲಿಯ ಪರ್ವತ ಪ್ರದೇಶಗಳು ಮತ್ತು ಕಾಫಿ ತೋಟಗಳ ಅನುಭವವನ್ನು ಬಯಸುವವರು ಕರ್ನಾಟಕದ ಕೊಡಗಿಗೆ ಭೇಟಿ ನೀಡಬಹುದು. 'ಭಾರತದ ಸ್ಕಾಟ್ಲೆಂಡ್' ಎಂದೇ ಖ್ಯಾತವಾಗಿರುವ ಕೊಡಗು, ತನ್ನ ಮಂಜು ಮುಸುಕಿದ ಬೆಟ್ಟಗಳು, ಹಸಿರು ಕಾಫಿ ತೋಟಗಳು, ಮತ್ತು ಭೋರ್ಗರೆವ ಜಲಪಾತಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಹೋಂಸ್ಟೇಗಳಲ್ಲಿ ತಂಗುವುದು, ಸ್ಥಳೀಯ ಕೊಡವ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ಅನುಭವಿಸುವುದು ಒಂದು ವಿಶಿಷ್ಟ ಅನುಭವ. ಅಬ್ಬಿ ಜಲಪಾತ, ರಾಜಾ ಸೀಟ್, ತಲಕಾವೇರಿಯಂತಹ ಪ್ರೇಕ್ಷಣೀಯ ಸ್ಥಳಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಬಾಲಿಯಂತೆ, ಇಲ್ಲೂ ಕೂಡ ಪ್ರಕೃತಿಯ ಮಡಿಲಲ್ಲಿ ಶಾಂತಿಯುತವಾಗಿ ಕಾಲ ಕಳೆಯಲು ಮತ್ತು ಚೈತನ್ಯವನ್ನು ಮರಳಿ ಪಡೆಯಲು ಸಾಧ್ಯ.
ರಿಷಿಕೇಶ, ಉತ್ತರಾಖಂಡ
ಬಾಲಿಯನ್ನು ಯೋಗ ಮತ್ತು ಆಧ್ಯಾತ್ಮಿಕತೆಯ ಕೇಂದ್ರವೆಂದು ಪರಿಗಣಿಸುವಂತೆಯೇ, ಭಾರತದಲ್ಲಿ 'ವಿಶ್ವದ ಯೋಗ ರಾಜಧಾನಿ' ಎಂದೇ ಖ್ಯಾತವಾದ ರಿಷಿಕೇಶವಿದೆ. ಗಂಗಾ ನದಿಯ ತಟದಲ್ಲಿರುವ ಈ ಪಟ್ಟಣವು ಯೋಗಾಶ್ರಮಗಳು, ಧ್ಯಾನ ಕೇಂದ್ರಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಪ್ರಸಿದ್ಧವಾಗಿದೆ. ಸಂಜೆಯ ಗಂಗಾ ಆರತಿಯ ದೃಶ್ಯವು ಮನಮೋಹಕವಾಗಿರುತ್ತದೆ. ಬಾಲಿಯಲ್ಲಿರುವಂತೆ ಇಲ್ಲಿಯೂ ಸಾಹಸ ಚಟುವಟಿಕೆಗಳಿಗೆ ಕೊರತೆಯಿಲ್ಲ. ರಿವರ್ ರಾಫ್ಟಿಂಗ್, ಬಂಗೀ ಜಂಪಿಂಗ್ ಮತ್ತು ಟ್ರೆಕ್ಕಿಂಗ್ನಂತಹ ಚಟುವಟಿಕೆಗಳು ಸಾಹಸಪ್ರಿಯರನ್ನು ಆಕರ್ಷಿಸುತ್ತವೆ. ಪವಿತ್ರ ವಾತಾವರಣ ಮತ್ತು ಹಿಮಾಲಯದ ತಪ್ಪಲಿನಲ್ಲಿರುವ ಪ್ರಕೃತಿ ಸೌಂದರ್ಯವು ರಿಷಿಕೇಶವನ್ನು ಬಾಲಿಗೆ ಒಂದು ಉತ್ತಮ ಪರ್ಯಾಯವನ್ನಾಗಿ ಮಾಡುತ್ತದೆ.













